ಧರ್ಮೇಗೌಡರ ಸಾವಿನ ಸತ್ಯಾಂಶ ಹೊರಬರಲು ತನಿಖೆಯಾಗಬೇಕು : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.29- ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡರ ಸಾವಿನ ಬಗ್ಗೆ ಸತ್ಯಾಂಶ ಹೊರಬರಲು ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರು ಅಕಾಲಿಕ ಸಾವಿಗೆ ತುತ್ತಾಗುತ್ತಾರೆ ಎಂದು ಊಹೆ ಕೂಡ ಮಾಡಿರಲಿಲ್ಲ. ಘಟನೆಗೆ ಕಾರಣಕರ್ತರ್ಯಾರು ಎಂಬ ಸತ್ಯಾಂಶ ಹೊರಬರಬೇಕು ಎಂದರು.

ಇಂದಿನ ರಾಜಕಾರಣದಲ್ಲಿ ನಿಜವಾದ ಧರ್ಮರಾಯರಾಗಿದ್ದರು. ಸರಳ, ಸಜ್ಜನ, ಪ್ರಾಮಾಣಿಕರಾಗಿದ್ದರು. ಈ ಘಟನೆಯಿಂದ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜಕೀಯ ಇರುತ್ತೆ, ಹೋಗುತ್ತೆ. ಇಂತಹ ಅನಾಹುತ ಮರುಕಳಿಸದಂತೆ ಎಲ್ಲ ರಾಜಕಾರಣಿಗಳೂ ನೋಡಿಕೊಳ್ಳಬೇಕು. ರಾಜ್ಯದ ಸಂಪತ್ತು ಲೂಟಿ ಮಾಡಿದವರು ಧೈರ್ಯವಾಗಿ ಬದುಕುತ್ತಾರೆ. ಇಂತಹ ಸೂಕ್ಷ್ಮ ಜೀವಿಗಳೂ ಇರುತ್ತಾರೆ ಎಂದು ಭಾವುಕರಾಗಿ ಕಣ್ಣೀರು ಸುರಿಸಿದರು.

ಪ್ರಜಾಪ್ರಭುತ್ವದ ಹೆಸರಿನಲ್ಲಿ ಹುಡುಗಾಟಿಕೆ ಆಡುವುದು ಬೇಡ. ಬಹುಮತವಿಲ್ಲದ ಮೇಲೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದರೆ ಏನಾಗುತ್ತಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪರೀಕ್ಷೆ ಮಾಡಬೇಕಿತ್ತೆ ಎಂದು ಪ್ರಶ್ನಿಸಿದರು. ಯಾವುದೇ ಒತ್ತಡಕ್ಕೆ ಮಣಿಯುವುದು ಬೇಡ ಎಂದು ನಾನು ಮತ್ತು ಗೌಡರು ಧರ್ಮೇಗೌಡರಿಗೆ ಸಲಹೆ ಮಾಡಿದ್ದೆವು.

ವಿಧಾನ ಪರಿಷತ್‍ನಲ್ಲಿ ನಡೆದ ಕಹಿ ಘಟನೆಯಿಂದ ಅವರಿಗೆ ತುಂಬಾ ನೋವುಂಟಾಗಿತ್ತು. ಸಭಾಪತಿಯವರ ನೋಟಿಸ್‍ಗೆ ವಿಧಾನ ಪರಿಷತ್ ಕಾರ್ಯದರ್ಶಿ ಉತ್ತರ ಕೊಟ್ಟಿದ್ದಾರೆ. ಅದರಲ್ಲಿ ಧರ್ಮೇಗೌಡರ ವಿರುದ್ಧವಿದೆ ಎಂದು ತಿಳಿದುಬಂದಿದೆ. ಸತ್ಯಾಸತ್ಯತೆ ಪರಿಶೀಲನೆಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ಏಳು ಬೀಳು ಸಹಜ. ಆದರೆ, ಇವತ್ತಿನ ರಾಜಕಾರಣದಲ್ಲಿ ನಿಜವಾದ ಧರ್ಮರಾಯನನ್ನು ಕಳೆದುಕೊಂಡಿದ್ದೇವೆ. ರಾಜಕೀಯ ವ್ಯವಸ್ಥೆಯಲ್ಲಿ ಅವರನ್ನು ಕೊಲೆ ಮಾಡಿದಂತಾಗಿದೆ ಎಂದು ದುಃಖ ಹೊರಹಾಕಿದರು.

ವಿಧಾನ ಪರಿಷತ್‍ನ ಕಹಿ ಘಟನೆಯಾದ ನಂತರವೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿರುವುದಾಗಿ ಹೇಳಿದರು.  ಪಕ್ಷದ ಹಿರಿಯ ಮುಖಂಡರು ಹಾಗೂ ನನ್ನ ಸಹೋದರರಂತಿದ್ದ ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದರು.

Facebook Comments