ಸಿಡಿ ತನಿಖೆ ಸರ್ಕಾರಕ್ಕೆ ಬಿಟ್ಟ ವಿಚಾರ : ಎಚ್.ಡಿ.ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.22- ಮಾಜಿ ಸಚಿವರೊಬ್ಬರ ಮೇಲಿನ ಆರೋಪಕ್ಕೆ ಸಂಬಂಧಿಸಿದ ಸಿ.ಡಿ ವಿಚಾರದ ಬಗ್ಗೆ ತನಿಖೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ ಆರೋಪದ ವಿಚಾರಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ತನಿಖೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಮಾಹಿತಿ ಪಡೆಯಲಿ ಎಂದರು.

ಎಸಿಬಿ, ಎಸ್‍ಐಟಿ ಸೇರಿದಂತೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು ಸರ್ಕಾರ ನೋಡಿಕೊಳ್ಳಲಿದೆ. ಮೈತ್ರಿ ಸರ್ಕಾರವನ್ನು ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿ.ಡಿ ಆರೋಪಕ್ಕೆ ಕಾರಣ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರ ಬೀಳಿಸಿದ್ದಕ್ಕೆ ಬಹುತೇಕರಿಗೆ ಪಶ್ಚಾತ್ತಾಪವಾಗುತ್ತಿದೆ. ಪ್ರಸ್ತುತ ರಾಜ್ಯ ಸರ್ಕಾರದ ಕಾರ್ಯ ವೈಖರಿಯಿಂದ ಎಲ್ಲರೂ ಬೇಸತ್ತಿದ್ದಾರೆ. ವಿಧಾನಸಭೆ ಉಪಚುನಾವಣೆಗಳಲ್ಲಿ ಜನರು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದ ಅವರು, ಮಸ್ಕಿ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡು ವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಕೋರಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿ ದ್ದರೂ ಅಭಿವೃದ್ಧಿ ಮಾಡದೆ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ತಾವು ಮುಖ್ಯಮಂತ್ರಿಯಾಗಿದ್ದಾಗ 500 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಲಾಗಿತ್ತು. ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜನರಿಗಾಗಿ ಅಧಿಕಾರ ತ್ಯಾಗ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದಾರೆ ಎಂದು ಆರೋಪಿಸಿದರು.

ಕೊರೊನಾ ಸಾಂಕ್ರಾಮಿಕ ರೋಗದ ವಿಚಾರದಲ್ಲಿ ಸರ್ಕಾರ ಆಟವಾಡಬಾರದು. ಇಷ್ಟಬಂದಂತೆ ಮಾರ್ಗಸೂಚಿ ಗಳನ್ನು ನೀಡಿ ಜನತೆಯನ್ನು ಗೊಂದಲಕ್ಕೆ ದೂಡಬೇಡಿ ಎಂದು ಆಗ್ರಹಿಸಿದರು.

Facebook Comments