ಈಶ್ವರಪ್ಪ ನೀಡಿರುವ ದೂರು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿ : ಎಚ್‌ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.1- ರಾಜ್ಯ ಸರ್ಕಾರದ ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ದ ನೀಡಿರುವ ದೂರು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈಶ್ವರಪ್ಪ ಅವರು ನೀಡಿರುವ ದೂರನ್ನು ರಾಜ್ಯದ ಆಡಳಿತದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಹಗುರವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸಚಿವರು ನೀಡಿದ ದೂರಿನಿಂದಾಗಿ ಅನುದಾನ ಎಲ್ಲ ಕ್ಷೇತ್ರಗಳಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ ಅನುದಾನ ಹಂಚಿಕೆಯ ತಾರತಮ್ಯ ಸರಿಪಡಿಸಿ ಎಲ್ಲಾ ಕ್ಷೇತ್ರಗಳಿಗೂ ಸಮಾನ ಹಂಚಿಕೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈಶ್ವರಪ್ಪ ಅವರು ರಾಜ್ಯಪಾಲರು ಹಾಗೂ ಅವರ ಪಕ್ಷದ ಹೈಕಮಾಂಡ್‍ಗೆ ದೂರು ನೀಡಿರುವುದನ್ನು ಗಮನಿಸಿದರೆ ಸಂಪುಟ ದರ್ಜೆ ಸಚಿವರಿಗೂ ಸರ್ಕಾರದಲ್ಲಿ ಸ್ವಾತಂತ್ರ್ಯವಿಲ್ಲ ಎಂಬಂತಾಗಿದೆ. ಮುಖ್ಯಮಂತ್ರಿ ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು

Facebook Comments