ಬಿಎಸ್‍ವೈ ಕೆಳಗಿಳಿಸಲು ಅವರ ಪಕ್ಷದ ನಾಯಕರೇ ಕಾಯುತ್ತಿದ್ದಾರೆ : ಎಚ್‌ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಯಾವ ರೀತಿ ಕೆಳಗಿಳಿಸಬೇಕೆಂದು ಅವರ ಪಕ್ಷದ ಕೇಂದ್ರ ನಾಯಕರೇ ಕಾಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪನವರೇ ಇದು ಕೊನೆಯ ಸಂಪುಟ ಸಭೆಯಾಗಬಹುದು ಎಂದೇಕೆ ಹೇಳಿದ್ದರು? ಆ ರೀತಿ ಹೇಳಿರುವುದರ ಹಿಂದೆ ಅವರಿಗೆ ಎಷ್ಟು ಆತಂಕವಿದೆ ಎಂದು ಗೊತ್ತಾಗುತ್ತದೆ ಎಂದರು.

ಕಳೆದ ಲೋಕಸಭೆ ಚುನಾವಣಾ ಫಲಿತಾಂಶದ ಆಧಾರದ ಮೇಲೆ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲಾಗುತ್ತದೆ ಎಂಬ ಭರವಸೆ ಇದೆ. ಆದರೆ ಫಲಿತಾಂಶ ಬಂದನಂತರ ಅವರಿಗೆ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದರು. ಇಂದಿನಿಂದ ಚುನಾವಣಾ ಅಖಾಡ ಪ್ರಾರಂಭವಾಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಬೆವರು ಸುರಿಸುತ್ತಿದ್ದಾರೆ. ಒಂದೊಂದು ಮತವೂ ಮುಖ್ಯವಾಗಲಿದೆ. ಈ ಉಪಚುನಾವಣೆಯ ಕಣದಲ್ಲಿರುವ ಎಲ್ಲ ಅನರ್ಹ ಶಾಸಕರು ಸೋಲಬೇಕು. ಮಹಾರಾಷ್ಟ್ರ, ಗುಜರಾತ್ ಚುನಾವಣೆಯಲ್ಲಿ ಪಕ್ಷಾಂತರಿಗಳು ನೆಲ ಕಚ್ಚಿದ್ದಾರೆ. ರಾಜ್ಯದಲ್ಲೂ ಅದೇ ರೀತಿ ಆಗಲಿದೆ. ಕಾಂಗ್ರೆಸ್-ಬಿಜೆಪಿಗಿಂತ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯಲು ವ್ಯವಸ್ಥಿತ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.  ಕಂದಾಯ ಸಚಿವ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತೇವೆ. ಈ ಚುನಾವಣೆಯಲ್ಲಿ ನಮ್ಮದೇ ಆದ ಕಾರ್ಯತಂತ್ರವಿದೆ. ಹೋಟೆಲ್ ಮೆನುವಿನಲ್ಲಿರುವ ತಿಂಡಿ ಮಾತ್ರವಲ್ಲ ಎಂದು ತಿರುಗೇಟು ನೀಡಿದ ಅವರು, ನೆರೆಪೀಡಿತ ಜನರ ಕಷ್ಟ-ಸುಖ ಆಲಿಸಲು ಕಂದಾಯ ಸಚಿವರಾಗಿದ್ದರೂ ಅಲ್ಲಿಗೆ ಹೋಗಿಲ್ಲ ಎಂದು ಹೇಳಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ತಾವು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 500 ಕೋಟಿ ಅನುದಾನ ನೀಡಿದ್ದೆವು. ಇಲ್ಲಿಯವರೆಗೂ ಇತರೆ ಎಲ್ಲ ಅನುದಾನ ಸೇರಿ ಆ ಕ್ಷೇತ್ರಕ್ಕೆ ಸುಮಾರು 1300 ಕೋಟಿಯಷ್ಟು ಅನುದಾನ ಬಂದಿದೆ. ಈ ಚುನಾವಣೆಯಲ್ಲಿ ನಾವು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು.

Facebook Comments