ರಾಮನಗರ-ಚನ್ನಪಟ್ಟಣ ಕ್ಷೇತ್ರಗಳಲ್ಲಿ 1.20 ಲಕ್ಷ ಆಹಾರದ ಕಿಟ್ ಕೊಡ್ತೀವಿ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ‌.28-ರಾಮನಗರ – ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ 1.20 ಲಕ್ಷ ಕುಟುಂಬಗಳಿಗೆ ಆಹಾರದ ಕಿಟ್ ಕೊಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಆಹಾರದ ಕಿಟ್ ವಿತರಣೆಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ರಾಮನಗರದಲ್ಲಿ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತಾಡಿ ಅವರು ಎರಡೂ ಕ್ಷೇತ್ರಗಳ 60 ಸಾವಿರ ಜನರಿಗೆ ಆಹಾರದ ಕಿಟ್ ಕೊಡಲು ತೀರ್ಮಾನಿಸಿದ್ದೆವು. ಆದರೆ, ಈಗ 1.20 ಲಕ್ಷ ಕುಟುಂಬಗಳಿಗೆ ನೀಡುತ್ತಿದ್ದೇವೆ ಎಂದರು.

ರಾಮನಗರದಲ್ಲೇ ಮಗನ ಮದುವೆ ಮಾಡಬೇಕಿತ್ತು. ಕೊರೋನಾ ಎಫೆಕ್ಟ್ ನಿಂದಾಗಿ ಮಾಡಲಾಗಲಿಲ್ಲ. ಹಾಗಾಗಿ ಇವತ್ತು 5.50 ಕೋಟಿ ವೆಚ್ಚದಲ್ಲಿ ರಾಮನಗರ – ಚನ್ನಪಟ್ಟಣ ಜನರಿಗೆ ಫುಡ್ ಕಿಟ್ ಕೊಡುತ್ತಿದ್ದೇವೆ.

ಮುಂದೆ ಎರಡೂ ಕ್ಷೇತ್ರದ ಪ್ರತಿ ಮನೆಗೂ ಕೂಪನ್ ಕೊಟ್ಟು ಫುಡ್ ಕಿಟ್ ಕೊಡಲಾಗುವುದು. ಮಗನ ಮದುವೆ ಸಮಾರಂಭದ ಹಣವನ್ನು‌ಜನರಿಗಾಗಿ ಖರ್ಚು ಮಾಡುತ್ತಿದ್ದೇನೆ.ಅಕ್ಕಿ, ಬೇಳೆ, ಸಕ್ಕರೆ, ಈರುಳ್ಳಿ ಕೊಡುತ್ತಿದ್ದೇವೆ ಎಂದು ಹೇಳಿದರು.

ರಾಮನಗರ ಜಿಲ್ಲೆಯ ಕೊರೋನಾ ವರದಿ ನೆಗೆಟಿವ್ ಬಂದಿರುವು ದು ಸಂತೋಷವಾದ ಸುದ್ದಿ, ಆದರೆ ಜನ ಮೈಮರೆಯಬಾರದು. ಈ ಸಂದರ್ಭದಲ್ಲಿ ನೆಗೆಟಿವ್ ಬಂದು ಮತ್ತೆ ಸೋಂಕು ಕಾಣಿಸುವ ಸಾಧ್ಯತೆ ಇದೆ.

ಹಾಗಾಗಿ ಇನ್ನು ಎರಡು ವಾರಗಳ ಕಾಲ ಸಿಬ್ಬಂದಿಗಳು ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ ಕೂಡ ಎಚ್ಚರದಿಂದ ಕೆಲಸ ಮಾಡಬೇಕು, ಯಾವುದೇ ನಿರ್ಲಕ್ಷ್ಯ ಮಾಡಬಾರದು. ಜನರು ಕೂಡ ಆತಂಕಕ್ಕೆ ಒಳಗಾಗಬಾರದು.

50 ಸಾವಿರ ಕೋಟಿ ರೂ ಮ್ಯೂಚುವಲ್ ಫಂಡ್ ಹಣ ಘೋಷಣೆ ಮಾಡಿದ್ದಾರೆ. ಅದು ದೊಡ್ಡ ಮಾಲೀಕರಿಗೆ ಅನುಕೂಲವಾಗಲಿದೆ. ಅದರಿಂದ ಜನಸಾಮಾನ್ಯರಿಗೆ ಏನು ಅನುಕೂಲವಿಲ್ಲ. ಈಗ ಲಕ್ಷಾಂತರ ಕುಟುಂಬಗಳಿಗೆ ಸರ್ಕಾರ ಶಕ್ತಿ ತುಂಬಬೇಕು‌.

ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರ ಗಮನಕೊಟ್ಟಿಲ್ಲ. ಕೂಲಿ ಕಾರ್ಮಿಕರು, ರೈತರ ಬೆಳೆಗಳ ಬಗ್ಗೆ ಸರಿಯಾದ ನಿಲುವಿಲ್ಲ.
ಚಿತ್ರದುರ್ಗಾದ ಓರ್ವ ಹೆಣ್ಣು ಮಗಳು ಈರುಳ್ಳಿ ಬೆಳೆದು ಮಾರಾಟ ಮಾಡಲಾಗಿಲ್ಲ ಎಂದು ಸಿಎಂ ಗಮನಸೆಳೆದು ಅಳಲು ತೋಡಿಕೊಂಡಿದ್ದಾರೆ.

ಸಿಎಂ ಕೂಡ ಅವರ ನೋವಿಗೆ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಇದು ಓರ್ವ ಹೆಣ್ಣಿನ ಸಮಸ್ಯೆ ಅಲ್ಲ, ಇದು ಇಡೀ ರೈತ ಸಮುದಾಯದ ಸಮಸ್ಯೆ. ರಾಜ್ಯದ ಕೃಷಿಕರಿಗೆ ನೀವು ನ್ಯಾಯ ಕೊಡಿಸಬೇಕು.

ಸಿಎಂ ಗೆ ನಾನು ಈ ಮೂಲಕ ಮನವಿ ಮಾಡ್ತೇನೆ 450 ಕೋಟಿ ರೂ ಪರಿಹಾರ ಕೊಡಲು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಅದನ್ನಾದರೂ ಕೂಡಲೇ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಮನವಿ ಮಾಡಿದರು.

Facebook Comments

Sri Raghav

Admin