ಕಾಂಗ್ರೆಸ್ ನಾಯಕರಿಂದ ಹೊಸ ನಾಟಕ ಶುರುವಾಗಿದೆ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.15-ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ರಾಜಕೀಯ ಮುಖಂಡರನ್ನು ಸೆಳೆಯುವುದು ಸಾಮಾನ್ಯವಾಗಿದ್ದು, ಜೆಡಿಎಸ್ ನಾಯಕರನ್ನು ಸೆಳೆಯುವ ಕಾರ್ಯದಲ್ಲಿ ಕಾಂಗ್ರೆಸ್ ನಾಯಕರು ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಜೆಡಿಎಸ್‍ನ್ನು ಮುಗಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೂ ಏಳು ಶಾಸಕರನ್ನು ನಮ್ಮ ಪಕ್ಷದಿಂದ ಸೆಳೆದಿದ್ದರು. ಆದರೂ ಜೆಡಿಎಸ್ ಕಾರ್ಯಕರ್ತರ ಮತ್ತು ಮುಖಂಡರಿಂದ ಉಳಿದುಕೊಂಡಿದೆ ಎಂದರು.

ಕಾಂಗ್ರೆಸ್ ನಾಯಕರಿಂದ ಹೊಸ ನಾಟಕ ಶುರುವಾಗಿದ್ದು, ಇದು ಕೂಡ ಜನರ ಹೃದಯವನ್ನು ಗೆಲ್ಲುವುದಿಲ್ಲ ಎಂದು ಹೇಳಿದರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಕೂಡಲೇ ಸಮಾಜದ ಮುಖಂಡರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ಅವರು ಯಾರಿಗೆ ರಕ್ಷಣೆ ಕೊಟ್ಟಿದ್ದಾರೆ, ಜನರ ಕಷ್ಟಸುಖಕ್ಕೆ ಎಷ್ಟರಮಟ್ಟಿಗೆ ಭಾಗಿಯಾಗಿದ್ದಾರೆ, ಕಿಂದರಜೋಗಿಯ ಹಿಂದೆ ಹೋದಂತೆ ಹೋಗಲು ಯಾವ ಕಾಣಿಕೆ ಇದೆ ಎಂದು ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸದೆ ಪ್ರಶ್ನಿಸಿದರು.

ಪಕ್ಷದ ಕೆಲವು ಮುಖಂಡರು ಪಕ್ಷಾಂತರವಾದರೂ ಕಾರ್ಯಕರ್ತರು ಪಕ್ಷದಲ್ಲೇ ಇರುತ್ತಾರೆ. ರಾಜಕಾರಣದಲ್ಲಿ ಬೇಜಾರು, ಕೋಪ ಮಾಡಿಕೊಂಡರೆ ಕೇಳುವವರು ಇರುವುದಿಲ್ಲ ಎಂದು ಪರೋಕ್ಷವಾಗಿ ಟೀಕಾ ಪ್ರಹಾರ ಮಾಡಿದರು.

ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಎಫ್‍ಐಆರ್ ದಾಖಲಿಸಿರುವ ಬಗ್ಗೆ ರಾಜಕಾರಣ ಬೆರೆಸುವ ಅಗತ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಮೂರು ಮಂದಿ ಮಾತ್ರ ಹೋಗಿದ್ದೆವು. ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಮಾಜಿ ಸದಸ್ಯ ಟಿ.ಎ.ಶರಣವ ಇದ್ದರೂ ಬರುವುದು ಬೇಡ ಎಂದು ಹೇಳಿದ್ದೆ. ಕಾರ್ಯಕರ್ತರನ್ನು ಹೆದರಿಸುತ್ತಾರೆ ಎಂಬ ಆರೋಪ ಮಾಡಿದ್ದಾರೆ.

ಕನಕಪುರದಲ್ಲಿ ಯಾವ ಯಾವ ರೀತಿ ಚುನಾವಣೆ ನಡೆಸಿದ್ದಾರೆ, ಎಷ್ಟರಮಟ್ಟಿಗೆ ಪರಿಶುದ್ದ ಮತ್ತು ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಕಾಂಗ್ರೆಸ್ ನಾಯಕರೇ ಜೆಡಿಎಸ್‍ನೊಂದಿಗೆ ಮೈತ್ರಿಯ ಅಗತ್ಯವಿಲ್ಲ ಎಂದು ಹೇಳಿದ ಮೇಲೆ ಆ ಬಗ್ಗೆ ನಾವೇಕೆ ಚರ್ಚೆ ಮಾಡಬೇಕು.

ಕಾಂಗ್ರೆಸ್‍ನವರು ವ್ಯಕ್ತಿಯನ್ನು ಸೋಲಿಸಲು ಬಯಸಿದರೆ ಅದೇ ನಕಾರಾತ್ಮಕವಾಗಲಿದೆ. ನಾವು ನಮ್ಮ ಪಕ್ಷದ ಸಾಧನೆ, ಕಾರ್ಯಕ್ರಮಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ.

ವ್ಯಕ್ತಿಯನ್ನು ಸೋಲಿಸುವುದು ಕಾಂಗ್ರೆಸ್‍ನವರ ಗುರಿಯಾಗಿದ್ದರೆ ನಮ್ಮದು ರಾಜ್ಯ ಸರಿಯಾಗಬೇಕೆಂಬ ಗುರಿಯಿದೆ ಎಂದು ಹೇಳಿದರು.
ಪುಲಿಕೇಶಿ ನಗರದಲ್ಲಿ ತಮ್ಮ ಪಕ್ಷದ ಶಾಸಕರಿಗೆ ಕಾಂಗ್ರೆಸ್‍ನವರು ರಕ್ಷಣೆ ಕೊಡಲಾಗಲಿಲ್ಲ ಎಂದು ಅವರು ಆರೋಪಿಸಿದರು.

Facebook Comments

Sri Raghav

Admin