ರಾಜ್ಯದಲ್ಲಿ ಕುದುರೆ ವ್ಯಾಪಾರ ಶುರುವಾಗಿದ್ದೆ ಕಾಂಗ್ರೆಸ್‍ನಿಂದ : ಹೆಚ್ಡಿಕೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ರಾಜಸ್ಥಾನದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದ ವಿರುದ್ಧ ನಿನ್ನೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರ್ ಸ್ವಾಮಿ ಅವರು, ಕುದುರೆ ವ್ಯಾಪಾರ ಶುರುವಾಗಿದ್ದೆ ಕಾಂಗ್ರೆಸ್‍ನಿಂದ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಟ ನಡೆಸುತ್ತಿದೆ.

ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ ? ಸರ್ಕಾರ ರಚಿಸಲು ಬೆಂಬಲ ನೀಡಿದ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ ? ಇದು ಖರೀದಿಯಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು, ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ ನಡೆಯೇ ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು.

ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೇ ? ಎಂದು ಕುಮಾರಸ್ವಾಮಿ ಕಿಡಿಕಾರಿದ್ದು, ಕಾಂಗ್ರೆಸ್ ಜೊತೆ ಜೆಡಿಎಸ್ ಸಮ್ಮಿಶ್ರ ರಚಿಸಿ ತಾವು ಮುಖ್ಯಮಂತ್ರಿಯಾಗಿದ್ದಾಗಿನ ಬೆಳವಣಿಗೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.

ಶಾಸಕರ ಖರೀದಿ ವಿಚಾರವಾಗಿ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲ್ಲವೇ ? ಇದು ಪ್ರಜಾಸತ್ತಾತ್ಮಕವೇ ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ಅಪರಾಧಿಗಳೇ ಎಂದು ಹೇಳಿದ್ದಾರೆ.

ಎಸ್.ಎಂ ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಮ್ಮ ಶಾಸಕರನ್ನು ಖರೀದಿ ಮಾಡಿರಲಿಲ್ಲವೇ ? 2018ರ ವಿಧಾನಸಭೆ ಚುನಾವಣೆ ನಂತರ ನಮ್ಮ ಶಾಸಕರನ್ನು ಖರೀದಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಹೊಂಚು ಹಾಕಿರಲಿಲ್ಲವೇ ? ಕಾಂಗ್ರೆಸ್‍ಗೆ ಈ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕತೆ ಇದೆಯೇ ? ಎಂದು ಹರಿಹಾಯ್ದಿದ್ದಾರೆ.

2004ರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದೇ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಇದನ್ನು ಮನಗಂಡೇ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಬೇಕಾಯಿತು.

ಪಕ್ಷಗಳನ್ನು ಒಡೆಯುವ, ಶಾಸಕರನ್ನು ಖರೀದಿಸುವ ವ್ಯವಾಹರದಲ್ಲಿ ಕಾಂಗ್ರೆಸ್ ನಿಪುಣ. ಕುದುರೆ ವ್ಯಾಪಾರ ಎಂಬ ಭಾಷೆ ಹುಟ್ಟಿದ್ದೇ ಕಾಂಗ್ರೆಸ್‍ನಿಂದ ಎಂದು ತನ್ನ ಹಳೆಯ ಮಿತ್ರ ಪಕ್ಷದ ವಿರುದ್ಧ ಕೆಂಡಕಾರಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿಲ್ಲ. ಆದ್ದರಿಂದಲೇ ಈ ಪ್ರಜಾಪ್ರಭುತ್ವ ವಿರೋಧಿ ಪ್ರಹಸನಗಳು ನಡೆಯುತ್ತಿವೆ. ಹಾಗಾಗಿ ಪಕ್ಷಾಂತರ ಮಾಡಿದ ವ್ಯಕ್ತಿ, ಆತನ ಕುಟುಂಬಕ್ಕೆ 2 ಅವಧಿಗೆ ಚುನಾವಣೆ ನಿರ್ಬಂಧಿಸುವ ಮತ್ತು ಈ ಅವಧಿಯಲ್ಲಿ ಯಾವುದೇ ಅಧಿಕಾರ ಹೊಂದದಂತೆ ಮಾಡುವುದು ಸೂಕ್ತ.

ಇದರತ್ತ ಚರ್ಚೆಗಳಾದರೂ ನಡೆಯಲಿ. ಪ್ರಜಾಪ್ರಭುತ್ವ ಉಳಿಯಲಿ ಎಂದು ಸಲಹೆ ನೀಡಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು ಪ್ರಾಣ ನೀಡುವುದಾಗಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೇಳುತ್ತಿದ್ದರು. ಸ್ವಾಮಿ, ಜೀವ ಅಮೂಲ್ಯ.

ನೀವು ಪ್ರಾಣ ಕೊಡುವುದು ಬೇಡ ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ನಡೆದು ಬಂದ ದಾರಿಯನ್ನು ಒಂದು ಬಾರಿ ನೆನಪಿಸಿಕೊಳ್ಳಿ. ನಂತರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸದೃಢಗೊಳಿಸುವತ್ತ ಚಿಂತನೆ ಮಾಡಿ. ಪ್ರಜಾಪ್ರಭುತ್ವ ತಂತಾನೆ ಉಳಿಯುತ್ತದೆ ಎಂದು ಕಟಕಿದ್ದಾರೆ.

2018ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ರಚಿಸಲಾದ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿಯಲ್ಲಿ ಚುನಾವಣೆ ಎದುರಿಸಿದ್ದವು.

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಆಯ್ಕೆ ಕಾಂಗ್ರೆಸ್ ಸಹಕಾರ ನೀಡಿತ್ತು. ಈಗ ಕುಮಾರಸ್ವಾಮಿ ತಮ್ಮ ಹಳೆಯ ಮಿತ್ರಪಕ್ಷದ ವಿರುದ್ಧವೇ ಕಿಡಿಕಾರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Facebook Comments

Sri Raghav

Admin