“ದೇವೇಗೌಡರಿಗೆ ಅಧಿಕಾರದ ಆಸೆಯಿಲ್ಲ, ಸೋನಿಯಾಜಿ ಮನವಿ ಮೇರೆಗೆ ನಾಮಪತ್ರ ಸಲ್ಲಿಸಿದ್ದಾರೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ. 9-ದೇವೇಗೌಡರಿಗೆ ಯಾವುದೇ ಅಧಿಕಾರದ ಆಸೆಯಿಲ್ಲ. ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಆಸಕ್ತಿಯನ್ನೂ ಹೊಂದಿರಲಿಲ್ಲ. ಭಾನುವಾರ ಸಂಜೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಫೋನ್ ಮಾಡಿ ನಂತರ ರಾಜಕೀಯ ಬೆಳವಣಿಗೆಗಳಾಗಿವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆಯಿಂದ ದೇವೇಗೌಡರ ಮನೆಯಲ್ಲಿ ಸುದೀರ್ಘವಾದ ಸಭೆ ನಡೆಸಿ ಅವರನ್ನು ನಾಮಪತ್ರ ಸಲ್ಲಿಸಲು ಒಪ್ಪಿಸಿದ್ದೇವೆ. ದೇವೇಗೌಡರಿಂದ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಹಾಕಿಸಬೇಕು ಎಂಬುದನ್ನು ನಾನು ಯೋಚಿಸಿರಲಿಲ್ಲ. ಇದು ಅನಿರೀಕ್ಷಿತ ಬೆಳವಣಿಗೆ. ಹಾಗಾಗಿ ರಾಜ್ಯದ ಕಾಂಗ್ರೆಸ್, ಬಿಜೆಪಿ ನಾಯಕರ ಜೊತೆ ನಾನು ಚರ್ಚೆ ಮಾಡಿಲ್ಲ ಎಂದರು.

ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರಂತಹ ಹಿರಿಯರ ಅನುಪಸ್ಥಿತಿ ಕಾಡುತ್ತಿದೆ. ದೇಶದಲ್ಲಿ ಹಲವಾರು ಬೆಳವಣಿಗೆಗಳಾಗುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಹಿರಿಯರ ಸಲಹೆಸೂಚನೆಗಳು ಅಗತ್ಯವಿದೆ ಎಂದು ಹೇಳಿದರು.

ಸೋನಿಯಾ ಗಾಂಧಿ ಅವರು ಕರೆ ಮಾಡಿದ ಬಳಿಕ ದೇವೇಗೌಡರು ನಾಮಪತ್ರ ಸಲ್ಲಿಸುವ ಚರ್ಚೆಗಳಾದವು. ಕೊನೆಗೆ ನಾವೆಲ್ಲರೂ ಸೇರಿ ಅವರನ್ನು ಒಪ್ಪಿಸಿದ್ದೇವೆ. ದೇವೇಗೌಡರು ಪ್ರಧಾನಿಯಾಗಿದ್ದವರು. ಅವರಿಗೆ ಇನ್ಯಾವುದೇ ಅಧಿಕಾರದ ಆಸೆಯಿಲ್ಲ. ರಾಜ್ಯಸಭೆ ಸ್ಥಾನಕ್ಕಾಗಿ ಅವರು ಆಸೆ ಇಟ್ಟುಕೊಂಡಿಲ್ಲ. ಕಾಂಗ್ರೆಸ್ ಜೆಡಿಎಸ್‍ಗಿಂತಲೂ ಹೆಚ್ಚುವರಿ ಮತಗಳು ಜೆಡಿಎಸ್ ಬಳಿ ಇವೆ.

ನಮ್ಮಲ್ಲಿ 34 ಮಂದಿ ಶಾಸಕರಿದ್ದಾರೆ. ಕಾಂಗ್ರೆಸ್‍ನಲ್ಲಿ 22 ಹೆಚ್ಚುವರಿ ಮತಗಳಿವೆ. ಬಿಜೆಪಿಯಲ್ಲಿ ಸುಮಾರು 27 ಮತಗಳು ಉಳಿಕೆಯಾಗಲಿವೆ. ಹೀಗಾಗಿ ಹೆಚ್ಚುವರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ನಮ್ಮ ಪಾತ್ರ ಬಹಳ ಮುಖ್ಯವಾಗುತ್ತಿತ್ತು.

ಬಿಜೆಪಿ 2, ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲು ಅನುಕೂಲಕರ ಸಂಖ್ಯಾಬಲವಿದೆ. ಹೀಗಾಗಿ ಈ ಹಿಂದೆ ನಡೆದ ಸಭೆಯ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ವಿಷಯವಾಗಿ ನಾವು ಚರ್ಚೆ ಮಾಡಿದ್ದೆವು. ಅಂದಮಾತ್ರಕ್ಕೆ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ನನ್ನ ಸರ್ಕಾರವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಸ್ಥಿರಗೊಳಿಸಿದ್ದವು. ಅದೇ ಈ ಸರ್ಕಾರಕ್ಕೆ ಗಂಡಾಂತರ ತಂದೊಡ್ಡುವ ಸಾಧ್ಯತೆ ಇರುತ್ತದೆ. ಬಿಜೆಪಿ ನಾಯಕರು ಎಚ್ಚರಿಕೆಯಿಂದ ಇರಲಿ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ನಾನು ಬೆಂಬಲ ಕೊಡುವುದಿಲ್ಲ ಎಂದು ಮೊದಲನಿಂದಲೂ ಹೇಳುತ್ತಾ ಬಂದಿದ್ದೇನೆ. ಇತ್ತೀಚಿನ ಸಭೆಯಲ್ಲೂ ಅದನ್ನೇ ಹೇಳಿದ್ದೇನೆ ಎಂದು ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದರು.

ದೇವೇಗೌಡರ ಆಯ್ಕೆ ಹೊಂದಾಣಿಕೆ ರಾಜಕಾರಣ ಅಲ್ಲ. ಗೆಲುವಿನ ಹಿಂದೆ ಹಲವಾರು ಧ್ವನಿಗಳಿರುತ್ತವೆ. ಆದರೆ ಸೋಲಿಗೆ ಯಾರೂ ದನಿಗೂಡಿಸುವುದಿಲ್ಲ. ರಾಜ್ಯಸಭೆಗೆ ದೇವೇಗೌಡರ ಆಯ್ಕೆಯನ್ನು ಯಾರೂ ಬೇಕಾದರೂ ಕ್ಲೈಮ್ ಮಾಡಿಕೊಳ್ಳಲಿ ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ ಎಂದು ಹೇಳಿದರು.

Facebook Comments