ಕೊರೋನಾ ಗಂಭೀರತೆ ಅರಿತು ಸರ್ಕಾರ ನಡೆದುಕೊಳ್ಳಬೇಕು : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬಿಡದಿ, ಏ.12- ಕೋವಿಡ್ ಎರಡನೆ ಅಲೆ ತೀವ್ರವಾಗಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಾತ್ರಿ ಕಫ್ರ್ಯೂ ಹಾಗೂ ಲಾಕ್‍ಡೌನ್ ಜಾರಿ ಮಾಡುವುದರಿಂದ ಯಾರಿಗೆ ಉಪಯೋಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕರು ಗುಂಪು ಸೇರುವ ಕಡೆ ಸಾಮಾಜಿಕ ಅಂತರ ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು.

ಸೋಂಕು ತೀವ್ರವಾಗಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬೇರೆ ರೀತಿಯ ಚಟುವಟಿಕೆಗಳ ಅಗತ್ಯವಿತ್ತೆ ಎಂದು ಪ್ರಶ್ನಿಸಿದ ಅವರು, ಸೋಂಕು ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳು ಸಿಗುತ್ತಿಲ್ಲ. ಹಾಸಿಗೆಗಾಗಿ ಶಿಫಾರಸು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಇಂಜೆಕ್ಷನ್ ಕೊರತೆಯೂ ಕೂಡ ಉಂಟಾಗಿದೆ.

ತಜ್ಞರ ಪ್ರಕಾರ ಬೆಂಗಳೂರು ನಗರದಲ್ಲಿ 15 ರಿಂದ 20 ಸಾವಿರ ಕೋವಿಡ್ ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ವಿಷಯದ ಗಂಭೀರತೆಯನ್ನು ಅರಿತು ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.

# ಮಾತುಕತೆ ಮೂಲಕ ಬಗೆಹರಿಸಿ:
ರಾಜ್ಯ ಸರ್ಕಾರ ಉದ್ಧಟತನ ಬಿಟ್ಟು ಮುಷ್ಕರ ನಿರತ ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಬಗೆಹರಿಸಬೇಕು. ಮುಷ್ಕರದಿಂದಾಗಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಕಾಲಾವಕಾಶವನ್ನಾದರೂ ಹೇಳುವ ಸೌಜನ್ಯ ತೋರದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಕಾನೂನು ಕ್ರಮದ ಮೂಲಕ ಹಾಗೂ ನೌಕರರನ್ನು ಹೆದರಿಸುವ ಮೂಲಕ ಬಿಕ್ಕಟ್ಟಿಗೆ ಪರಿಹಾರ ದೊರೆಯುವುದಿಲ್ಲ. ಸರ್ಕಾರ ನೌಕರರ ಬಗ್ಗೆ ಹೊಂದಿರುವ ಬಿಗಿ ಧೋರಣೆಯನ್ನು ಸಡಿಲ ಮಾಡಬೇಕು. ವಿವಿಧ ರೀತಿಯ ರಿಯಾಯ್ತಿ ದರದ ಪಾಸುಗಳನ್ನು ಸಾರಿಗೆ ಸಂಸ್ಥೆಗಳು ನೀಡುತ್ತವೆ. ಆ ಪಾಸುಗಳಿಗೆ ಸಂಬಂಸಿದ ಹೊಂದಾಣಿಕೆ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವುದರಿಂದ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುವಂತಾಗಿದೆ ಎಂದು ಅವರು ತಿಳಿಸಿದರು.

ಪಕ್ಷ ಬಿಟ್ಟು ಹೋಗುವವರಿಗೆ ಜೆಡಿಎಸ್‍ನಿಂದ ಏನು ಅನ್ಯಾಯವಾಗಿದೆ ಎಂಬುದನ್ನು ತಿಳಿಸಲಿ. ರಾಮನಗರಕ್ಕೆ ಯಾವುದೇ ರೀತಿಯ ದ್ರೋಹ ಬಗೆದಿಲ್ಲ. ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಪಕ್ಷ ಬಿಟ್ಟು ಹೋಗುವವರ ಬಗ್ಗೆ ಜನರೇ ತೀರ್ಮಾನ ಕೈಗೊಳ್ಳಬೇಕು.

ರಾಮನಗರ, ಚನ್ನಪಟ್ಟಣ, ನಗರಸಭೆ ಚುನಾವಣೆ ಸಂದರ್ಭದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಮನವೊಲಿಸುವ ಪ್ರಯತ್ನ ಮಾಡಲಾಗುವುದು.

ಪಕ್ಷದಲ್ಲಿ ಏನೇ ಗೊಂದಲವಿದ್ದರೂ ಬಗೆಹರಿಸಲಾಗುವುದು. ಏ.17ರ ನಂತರ ರಾಮನಗರ , ಚನ್ನಪಟ್ಟಣ ನಗರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

Facebook Comments

Sri Raghav

Admin