ಪ್ರಧಾನಿ ಬಳಿ ಗಟ್ಟಿ ಧ್ವನಿಯಲ್ಲಿ ಪರಿಹಾರ ಕೇಳದ ದುರ್ಬಲ ಸಿಎಂ : ಹೆಚ್ಡಿಕೆ ಟ್ವೀಟ್ ಅಟ್ಯಾಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8-ನೆರೆಯಿಂದ ಬದುಕು ಮೂರಾಬಟ್ಟೆಯಾಗಿರುವ ಜನರ ಕಷ್ಟ ಕೇಳಲು ಪ್ರಧಾನಿ ಮೋದಿಯವರಿಗೆ ಸಮಯವಾಗಿಲ್ಲ. ಪರಿಹಾರವನ್ನು ಗಟ್ಟಿ ಧ್ವನಿಯಲ್ಲಿ ಕೇಳಲಾಗದಷ್ಟು ನಮ್ಮ ಮುಖ್ಯಮಂತ್ರಿಗಳು ದುರ್ಬಲವಾಗಿರುವುದು ದುರ್ದೈವ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್‍ಗಳ ಮೂಲಕ ಬಿಜೆಪಿ ಸರ್ಕಾರವನ್ನು ಮತ್ತು ನಾಯಕರನ್ನು ತರಾಟೆಗೆತೆಗೆದುಕೊಂಡಿದ್ದಾರೆ.ಚಂದ್ರಯಾನ-2 ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸ್ವಾಗತಾರ್ಹ.

ಆದರೆ ನೆರೆಯಿಂದ ತತ್ತರಿಸಿ ಬೀದಿಗೆ ಬಿದ್ದಿರುವ ಸಾವಿರಾರು ಕುಟುಂಬಗಳು ಮತ್ತು ಮಕ್ಕಳತ್ತ ತಿರುಗಿಯೂ ನೋಡದೆ, ಕೇಂದ್ರದಿಂದ ಯಾವುದೇ ಪರಿಹಾರ ಘೋಷಿಸದೆ ಹಾಗೆಯೇ ತೆರಳಿದ್ದು ನೋವಿನ ವಿಚಾರ ಎಂದಿದ್ದಾರೆ.

ರಾಜ್ಯದಲ್ಲಿ ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಪ್ರಧಾನಿಯವರು ಬೆಂಗಳೂರಿಗೆ ಬಂದಿದ್ದರೂ ಅವರನ್ನು ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆಗೆ ಕರೆದೊಯ್ಯಲು ರಾಜ್ಯ ಬಿಜೆಪಿ ನಾಯಕರಿಂದ ಸಾಧ್ಯವಾಗಿಲ್ಲ.

ಕೇಂದ್ರಸರ್ಕಾರದಿಂದ ಪರಿಹಾರವನ್ನು ಗಟ್ಟಿ ಧ್ವನಿಯಲ್ಲಿ ಕೇಳಲು ಸಾಧ್ಯವಾಗದಷ್ಟು ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದುರ್ಬಲರಾಗಿರುವುದು ರಾಜ್ಯದ ದುರ್ದೈವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟದ ಸಚಿವರು ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಬಡವರ ಕಷ್ಟಗಳನ್ನು ಕೇಳಿ ಪರಿಹಾರ ಕಾರ್ಯಗಳ ಪರಿಶೀಲನೆ ಮಾಡಬೇಕಾದ ಸಂದರ್ಭದಲ್ಲಿ ಬೆಂಗಳೂರು ನಗರ ಪರಿವೀಕ್ಷಣೆ ಎಂಬ ನಾಟಕವಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿ ನಾಮ ಪರಿವರ್ತನೆ ಮಾಡಿದ ದಿನದಂದೇ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ನೀಡಲಾಗಿದ್ದ 450 ಕೋಟಿ ರೂ.ಗಳ ಅನುದಾನವನ್ನು ಕಡಿತ ಮಾಡಿದ್ದಕ್ಕಾಗಿ ಗುರುಮಿಟ್ಕಲ್ ಕ್ಷೇತ್ರದ ಸಮಸ್ತ ನಾಗರಿಕರ ಪರವಾಗಿ ಮುಖ್ಯಮಂತ್ರಿಯವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ.

Facebook Comments

Sri Raghav

Admin