ಸಿದ್ದರಾಮಯ್ಯ ನೀಡುವ ಸರ್ಟಿಫಿಕೆಟ್ ಬೇಕಿಲ್ಲ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.3- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾವು ಪ್ರಮಾಣಪತ್ರ ಪಡೆಯಬೇಕಿಲ್ಲ. ನಾಡಿನ ಜನರೇ ನಮಗೆ ಸರ್ಟಿಫಿಕೆಟ್ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಿನ್ನೆ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜಾತ್ಯತೀತತೆಯನ್ನು ಪರೀಕ್ಷಿಸಲು ಕಾಂಗ್ರೆಸ್‍ನ ಕೆಲವರು ಮಾತ್ರ ಹೊರಟಿದ್ದಾರೆ. ಸಿದ್ದರಾಮಯ್ಯ ಅವರು ನಮ್ಮ ಬಂಡವಾಳ ಬಯಲು ಮಾಡುವುದಾಗಿ ಹೇಳುತ್ತಾರೆ. ಅದೇನು ಬಯಲು ಮಾಡುತ್ತಾರೋ ಮಾಡಲಿ ಎಂದು ಸವಾಲು ಹಾಕಿದರು.

ವಿಷಯಾಧಾರಿತವಾಗಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬೆಂಬಲ ನೀಡುತ್ತೇವೆ. ಸಭಾಪತಿ ಸ್ಥಾನದಲ್ಲಿ ಇರಲು ಇಷ್ಟವಿಲ್ಲ ಎಂದು ಸಭಾಪತಿ ಅವರೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‍ನ ಒಂದು ವರ್ಗದ ನಾಯಕರು ಸಭಾಪತಿ ಸ್ಥಾನ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಜೆಡಿಎಸ್ ಪಕ್ಷದ ಬಣ್ಣವನ್ನು ಬಯಲು ಮಾಡಲು ಸಿದ್ದರಾಮಯ್ಯ ಅವರು ಹೊರಟಿದ್ದಾರೆ. ಹೀಗಾಗಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ವಿಳಂಬ ಮಾಡಲಾಗುತ್ತಿದೆ.

ಸಿದ್ದರಾಮಯ್ಯ ಅವರು ದಿನಬೆಳಗಾದರೆ ಜೆಡಿಎಸ್ ಬಗ್ಗೆಯೇ ಮಾತನಾಡುತ್ತಾರೆ. ಜೆಡಿಎಸ್ ಪಕ್ಷವೇ ಇಲ್ಲ ಎನ್ನುತ್ತಾರೆ. ಕಾಂಗ್ರೆಸ್‍ಗೆ ಬಹುಮತವಿಲ್ಲದಿದ್ದರೂ ನಾಚಿಕೆ ಬಿಟ್ಟು ಸಭಾಪತಿ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಟೀಕಿಸಿದರು. ನಾಡಿನ ಜನತೆಗೆ ಒಳ್ಳೆಯದಾಗುವ ಕಾರ್ಯಕ್ರಮಗಳಿಗೆ ವಿಷಯಾಧಾರಿತವಾಗಿ ಬೆಂಬಲ ನೀಡಲಾಗುವುದು. ಜನರಿಗೆ ಅನಾಹುತವಾಗುವ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲವಿಲ್ಲ. ಜನರ ರಕ್ಷಣೆಯ ಜವಾಬ್ದಾರಿ ಬಹಳ ಮುಖ್ಯ ಎಂದು ಹೇಳಿದರು.

ನಾವು ಯಾರಿಗೂ ಕಂಬಳಿ ಹಾಸಿಲ್ಲ. ಹಾಸಿಕೊಳ್ಳುವವರು ಬರುತ್ತಾರೆ, ಹೋಗುತ್ತಾರೆ. ಜೆಡಿಎಸ್ ಪಕ್ಷವನ್ನು ಉಪಯೋಗಿಸಿಕೊಳ್ಳುತ್ತಾರೆ. ಆನಂತರ ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಪರೋಕ್ಷವಾಗಿ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಪಕ್ಷ ಸಂಘಟನೆಯ ರೂಪುರೇಷೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ನಮ್ಮ ಪಕ್ಷ ಸಂಘಟನೆಯೊಂದಿಗೆ ಹೋರಾಟ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Facebook Comments