ಹಳೆ ದೋಸ್ತಿ ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ಈಗ ಇದ್ದಕ್ಕಿದ್ದಂತೆ ರೊಚ್ಚಿಗೆದ್ದಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.30- ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಹದಿನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಈಗ ಏಕಾಏಕಿ ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದಿರುವುದು ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಸಂಘರ್ಷಕ್ಕಿಳಿದಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ತಂತ್ರ ವಿಧಾನಸಭೆ ನಿರ್ಮಾಣವಾದಾಗ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಜೆಡಿಎಸ್ ವರಿಷ್ಠರ ಮನೆ ಬಾಗಿಲಿಗೆ ಹೋಗಿ ಮೈತ್ರಿ ಮಾಡಿಕೊಂಡಿತ್ತು.

ಅದನ್ನು ಕುಮಾರಸ್ವಾಮಿ ತಮ್ಮ ಟ್ವಿಟ್‍ನಲ್ಲಿ ಹಂಗಿಸಿದ್ದು, ಬೇಡ ಎಂದರು ಕಾಂಗ್ರೆಸ್ ನಾಯಕರು ನಮ್ಮ ಮನೆಗೆ ಬಂದು ನಡು ಬಗ್ಗಿಸಿ ನಿಂತು ನನ್ನನ್ನು ಮುಖ್ಯಮಂತ್ರಿ ಮಾಡಿದರು. ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಸಲಹೆ ನೀಡಿದರು.

ಅದಕ್ಕೆ ಅಡ್ಡಿ ಪಡಿಸಿದವರು ಯಾರು ಎಂದು ಹುಡುಕಿಕೊಂಡರೆ ಕಾಂಗ್ರೆಸ್‍ಗೆ ಉತ್ತರ ಸಿಗಲಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ.

ರಾಜಸ್ಥಾನದಲ್ಲಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಅದನ್ನು ಪ್ರಶ್ನಿಸುವ ಸಂದರ್ಭದಲ್ಲಿ ಕುಮಾರಸ್ವಾಮಿ ಕಾಂಗ್ರೆಸ್‍ನ್ನು ಟೀಕಿಸಿದ್ದರು.

ಮೇಲೆ ಬಿದ್ದು ಅಧಿಕಾರ ಕೊಟ್ಟು ಸಿಎಂ ಮಾಡಿದ ಕಾಂಗ್ರೆಸಿಗರು ಬ್ಯಾಕ್ ಸೀಟ್‍ನಲ್ಲಿ ಕುಳಿತು ನನ್ನನ್ನು ನಿಯಂತ್ರಿಸಲು ಪಯತ್ನಿಸಿದರು. ನಾನು ಎಚ್ಚೇತ್ತುಕೊಂಡೆ, ರೈತರ ಪರವಾಗಿ ಸಾಲಮನ್ನಾ ಮಾಡಿದೆ ಎಂದು ಹೇಳಿದ್ದಾರೆ.

ನನ್ನ ಅಭಿಪ್ರಾಯಗಳಿಗೆ ನೇರವಾಗಿ ಉತ್ತರ ಹೇಳಲು ಸಾಧ್ಯವಾಗದ ಅತಿರಥ ನಾಯಕರು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ನನ್ನನ್ನು ಪ್ರಶ್ನೆ ಮಾಡಿ ಓಡಿ ಹೋಗಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಕುರಿತಂತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಸರ್ಕಾರ ರಚಿಸುವಾಗ ಕಾಂಗ್ರೆಸ್-ಜೆಡಿಎಸ್ ನಾಯಕರು ತಮ್ಮೇಲ್ಲಾ ಹಳೆಯ ಸಿಟ್ಟನ್ನು ಮರೆತು ಗಳಸ್ಯ-ಕಂಠಸ್ಯರಂತಿದ್ದರು. ಹಿಂದೆ ಮುಂದೆ ಯೋಚಿಸದೆ 2019ರ ಲೋಕಸಭೆ ಚುನಾವಣೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರು.

ಆ ವೇಳೆ ಸಿದ್ದರಾಮಯ್ಯ, ದೇವೇಗೌಡರು, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಎಲ್ಲರೂ ಒಂದೇ ವೇದಿಕೆ ಹಂಚಿಕೊಂಡಿದ್ದರು. ಇನ್ನೂ ಮುಂದೆ ನಾವು ಒಟ್ಟಾಗಿರುತ್ತೇವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುತ್ತೇವೆ ಎಂದು ಘೋಷಣೆ ಮಾಡಿದರು.

ಅದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಸೋಲುಕಂಡವು. ನಂತರ ಸರ್ಕಾರ ಪತನವಾಯಿತು. ಮೈತ್ರಿ ಮುರಿದು ಹೋಯಿತು. ಆದರೂ ಡಿ.ಕೆ.ಶಿವಕುಮಾರ್ ಅವರು ದೇವೇಗೌಡರ ಮನೆಗೆ ಭೇಟಿ ನೀಡಿ ಹುಟ್ಟು ಹಬ್ಬದ ಶುಭಾಷಯಗಳನ್ನು ಕೋರಿದ್ದರು.

ಡಿ.ಕೆ.ಶಿವಕುಮಾರ್ ಜಾಮೀನು ಪಡೆದು ಬೆಂಗಳೂರಿಗೆ ಬಂದಾಗ ಕುಮಾರಸ್ವಾಮಿ ಖುದ್ದು ಹೋಗಿ ಸ್ವಾಗತಿಸಿದ್ದರು. ಆದರೆ ಆರಂಭದಿಂದಲೂ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕರ ನಡುವೆ ಅಂತರಗಳಿದ್ದೆ ಇತ್ತು. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬೇಡ ಎಂದು ನಾನು ಆಗಲೇ ಹೇಳಿದ್ದೆ.

ನನ್ನ ಮಾತು ಯಾರು ಕೇಳಿರಲಿಲ್ಲ. ನನ್ನ ಧ್ವನಿ ಒಂಟಿಯಾಗಿತ್ತು. ಅದರ ಪರಿಣಾಮ ಫಲಿತಾಂಶ ಏನೆಂಬುದು ಎಲ್ಲರಿಗೂ ಗೋತ್ತಾಗಿದೆ ಎಂಬರ್ಥದಲ್ಲಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.

ಒಂದೆಡೆ ಕೆಲ ನಾಯಕರು ಜೆಡಿಎಸ್ ಮುಖಂಡರ ಜೊತೆ ಆತ್ಮೀಯರಾಗಿದ್ದಾರೆ. ಮತ್ತೊಂದೆಡೆ ಹಳೆ ಮೈಸೂರು ಭಾಗದ ಪ್ರಭಾವಿ ನಾಯಕ ಜೊತೆ ಕುಮಾರಸ್ವಾಮಿ ವಾಕ್‍ಸಮರಕ್ಕೀಳಿದಿದ್ದಾರೆ. ಸದ್ಯಕ್ಕೆ ಎಲ್ಲವೂ ಪರೋಕ್ಷವಾಗಿ ನಡೆಯುತ್ತಿದೆ.

ಮುಂದೆ ಇದು ಬಹಿರಂಗ ಚರ್ಚೆಯಾಗಿ ಎರಡು ಪಕ್ಷಗಳ ನಾಯಕರು ಪರಸ್ಪರ ವಾಗ್ವಾದಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಜಾತ್ಯತೀತ ನೆಲೆಯಲ್ಲಿ ರಾಜಕಾರಣ ಮಾಡುವ ಸಿದ್ಧಾಂತ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತೆ ಎದುರಾಳಿಗಳಾಗಿ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿವೆ.

ಇಲ್ಲಿ ಸಿದ್ದರಾಮಯ್ಯ ಸಿಂಬಾಲಿಕ್ ಆಗಿ ಮಾತ್ರ ಉಳಿದಿದ್ದಾರೆ. ಎರಡು ಪಕ್ಷಗಳ ಸಮಾನ ಎದುರಾಳಿ ಬಿಜೆಪಿ ತೆರೆಮರೆಯಲ್ಲಿ ನಿಂತು ನಗುತ್ತಿದೆ.

Facebook Comments

Sri Raghav

Admin