ಉಪಚುನಾವಣೆ ಮುಗಿದ ಬೆನ್ನಲ್ಲೇ ವಿದ್ಯುತ್ ದರ ಹೆಚ್ಚಳ : ಸರ್ಕಾರದ ವರ್ತನೆಗೆ ರೇವಣ್ಣ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ನ.6- ಉಪಚುನಾವಣೆ ಕಳೆದ ಕೂಡಲೇ ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವ ಸರ್ಕಾರದ ವರ್ತನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಐದು ವಿದ್ಯುತ್ ಕಂಪೆನಿಗಳಿಂದ 7996 ಕೋಟಿ ನಷ್ಟವಿದೆ ಎಂದು ಅಂದಾಜಿಸಲಾಗಿದೆ. ಈ ನಷ್ಟ ಸರಿದೂಗಿಸಲು ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರತಿ ಯುನಿಟ್‍ಗೆ 40 ಪೈಸೆ ಹೆಚ್ಚಳ ಮಾಡಿರುವುದು ರಾಜ್ಯ ಇಂಧನ ಇಲಾಖೆಯಲ್ಲಿ ದುರದೃಷ್ಟಕರ ಬೆಳವಣಿಗೆ. ಇದರಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳಲಿದೆ ಎಂದರು. ನಾನು ಇಂಧನ ಸಚಿವನಾಗಿದ್ದಾಗ ಬೆಸ್ಕಾಂನಲ್ಲಿ 600 ಕೋಟಿ ಹಣ ಎಫ್‍ಡಿ ಇಟ್ಟಿದ್ದೆ. ಆದರೆ, ಈಗ ರೈತರಿಗೆ ವಿದ್ಯುತ್ ಟಿಸಿ ಹಾಕಲು 18 ಸಾವಿರ ಹಣದ ಜತೆಗೆ ಲಂಚ ಸೇರಿ 40 ಸಾವಿರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಕೆಇಬಿ ಕಾಂಟ್ರಾಕ್ಟ್‍ಗಳ ಬಾಕಿ ಬಿಲ್ 2 ರಿಂದ 3 ಸಾವಿರ ಕೋಟಿ ಇದೆ. ಮಂಗಳೂರಿನ ಏರ್ಪೋರ್ಟ್ ಅನ್ನು ಅಂಬಾನಿ ಕಂಪೆನಿಗೆ ಮಾರಿದಂತೆ ಕೆಇಬಿಯನ್ನು ಯಾವ ಕಂಪೆನಿಗೆ ಯಾವ ಕಂಪೆನಿಗೆ ಮಾರಾಟ ಮಾಡುತ್ತಾರೋ ಗೊತ್ತಿಲ್ಲ.  ಇಂಧನ ಇಲಾಖೆಯಲ್ಲಿ ನಡೆಯುತ್ತಿರುವ ಎಲ್ಲ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ರೇವಣ್ಣ ಒತ್ತಾಯಿಸಿದರು.

ಲೂಟಿಕೋರ ಸರ್ಕಾರ: ಪ್ರಧಾನಮಂತ್ರಿ ಮೋದಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು 10 ಪರ್ಸೆಟ್ ಸರ್ಕಾರ ಎಂದು ಜರಿದಿದ್ದರು. ಈಗ ರಾಜ್ಯದಲ್ಲಿ ಅವರದೇ ಸರ್ಕಾರವಿದ್ದರೂ 48 ಸಾವಿರ ಕುಟುಂಬಕ್ಕೆ ವಿದ್ಯಾರ್ಥಿ ವೇತನ ಬಂದಿಲ್ಲ. ಇದೊಂದು ಲೂಟಿಕೋರ ಸರ್ಕಾರವಾಗಿದೆ. ಈಗ ನಿಮ್ಮದು ಯಾವ ಸರ್ಕಾರ ಎಂಬುದನ್ನು ನೀವೇ ಹೇಳಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗುತ್ತಿದೆ. ವಿಪಕ್ಷಗಳನ್ನು ಹತ್ತಿಕ್ಕಲು ನಾಲ್ಕು ವರ್ಷದ ಹಿಂದಿನ ಮೊಕದ್ದಮೆಗಳಿಗೆ ಮರುಜೀವ ನೀಡಲಾಗುತ್ತಿದೆ. ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಭವಿಷ್ಯದಲ್ಲಿ ಬಿಜೆಪಿ ಪಕ್ಷಕ್ಕೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು.

ರೈತರ ಪರ ಹೋರಾಟ ಮಾಡಲು ನನ್ನನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ. ನನ್ನ ಹೋರಾಟ ಬಿಡುವುದಿಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಹಾಸನಾಂಬ ದೇವಿ ರಾಜ್ಯದಲ್ಲಿನ ಭ್ರಷ್ಟಾಚಾರ ತೊಲಗಿಸಿ ರಾಜ್ಯದ ಜನರಿಗೆ ಒಳ್ಳೆಯದು ಮಾಡಲಿ ಎಂದು ಅವರು ಪ್ರಾರ್ಥಿಸಿದರು.

Facebook Comments