“ನನ್ನ ಜನ ನರಳುವಾಗ ನಾನು ಮನೆಯಲ್ಲಿ ಕೂರಲಾರೆ” : ಹೆಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಕೋವಿಡ್​​ ಹಾವಳಿಯಿಂದ ಯುವಜನತೆ ಕೂಡ ಬಲಿಯಾಗುತ್ತಿದ್ದಾರೆ. ನನ್ನ ಹೆಂಡತಿ ಮನೆ ಬಿಟ್ಟು ಹೋಗಬೇಡಿ ಎನ್ನುತ್ತಾಳೆ. ನನ್ನ ಜಿಲ್ಲೆ ಜನ ಸಾಯುತ್ತಿರುವಾಗ ನಾನು ನೋಡಿಕೊಂಡು ಸುಮ್ಮನೆ ಕೂರಲು ಆಗೋದಿಲ್ಲ. ಅದಕ್ಕೆ ಮುಖ್ಯಮಂತ್ರಿಗಳ ಮನೆ ಮುಂದೆ ಹೋಗಿದ್ದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಆದ ಪರಿಸ್ಥಿತಿ ನಮ್ಮ ಜಿಲ್ಲೆಯಲ್ಲಿ ಆಗಬಾರದು. ಆಕ್ಸಿಜನ್ ಕೊರತೆ ನೀಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿರಬೇಕು. ನೆನ್ನೆ ಜಿಲ್ಲೆಯಲ್ಲಿ 2600 ಪ್ರಕರಣ ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ. ಎರಡನೇ ಕೋವಿಡ್ ಅಲೆಯಲ್ಲಿ ಇವರೆಗೆ 154 ಮಂದಿ ಜಿಲ್ಲೆಯಲ್ಲಿ ಸಾವಿಗೀಡಾಗಿದ್ದಾರೆ.

ಈಗಾಗಲೇ ಸಿಎಂ ಜೊತೆ ಮಾತುಕತೆ ನಡೆಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಲಕ್ಷ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ನನ್ನ ಮುಂದೆಯೇ ಹಾಸನ ಜಿಲ್ಲೆಯ ಡಿಸಿಗೆ ಫೋನ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಡಿಎಸ್ ಕೃಷ್ಣಮೂರ್ತಿಯವರ ವರ್ಗಾವಣೆ ಆದೇಶ ರದ್ದು ಮಾಡಿದ್ದು, ನನ್ನ ಮನವಿಗೆ ಮತ್ತು ಮಾಜಿ ಪ್ರಧಾನಿ ಮನವಿಗೆ ಸ್ಪಂದಿಸಿ ಕಳೆದ ಎರಡು ದಿನದಲ್ಲಿ ಜಿಲ್ಲೆಗೆ 1000 ರೆಮ್ಡಿಸಿವಿಯರ್ ಕಳುಹಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಈಗಾಗಲೇ ನನ್ನ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಭವಾನಿಯವರು ಪ್ರವಾಸ ಮಾಡಿ ಕೋವಿಡ್ ಕೆಲಸ ಮಾಡ್ತಿದ್ದಾರೆ. ಅವರೇ ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಸೋಂಕಿತರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಕಷಾಯ ಮಾಡಿ ಕುಡಿಯಲು ಸೂಚನೆ ನೀಡುತ್ತಿದ್ದಾರೆ.

ಮುರಾರ್ಜಿ ಶಾಲೆ ಪಡೆದು ಕೋವಿಡ್ ಸೆಂಟರ್ ಮಾಡಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಅಧಿಕಾರಿಗಳಿಗೆ ಸೂಚನೆ ನೀಡಿ ಹಾಸ್ಟೇಲ್​ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಿ ಸೋಂಕಿತರಿಗೆ ಅಲ್ಲಿ ಚಿಕಿತ್ಸೆ ನೀಡಿ. ಕೆಲ ನರ್ಸ್​ಗಳು ಕೆಲಸವಿಲ್ಲದೇ ಬೀದಿಯಲ್ಲಿ ಬಿದ್ದಿದ್ದಾರೆ. ಅಂತವರನ್ನು ತಾತ್ಕಾಲಿಕವಾಗಿ ಕರ್ತವ್ಯಕ್ಕೆ ಬಳಸಿಕೊಂಡು ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಲ್ಲಿ ಜನಪ್ರತಿನಿಧಿಗಳಿಗೆ ಮತ್ತು ಉಳ್ಳವರಿಗೆ ಬೆಡ್ ಸಿಗುತ್ತಿದೆ. ಬಡವರಿಗೆ ಬೆಡ್ ಸಿಗದೇ ಅವರು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಹಾಸನದಲ್ಲಿ ತರಕಾರಿ ಮಾರುವವರಿಗೆ ಪೊಲೀಸರು ತೊಂದರೆ ಕೊಡಬಾರದು.

ನಾಲ್ಕು ಕಾಸು ಸಿಗುತ್ತೆ ಅಂತ ನೂರಾರು ರೂ. ಖರ್ಚು ಮಾಡಿಕೊಂಡು ನಗರಕ್ಕೆ ತರಕಾರಿ ತಂದಿರುತ್ತಾರೆ. ಕೇವಲ ಎರಡು ಗಂಟೆಯಲ್ಲಿ ತರಕಾರಿ ಮಾರಲು ಸಾಧ್ಯವಾಗದೇ ಬೀದಿಗೆ ಎಸೆದು ಹೋಗುತ್ತಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸುಮಾರು 7 ಕೋಟಿ ಹಣವಿದೆ ಎಂದು ಹೇಳುತ್ತಾರೆ. ಇಂತಹ ಸಮಯದಲ್ಲಿ ಅದನ್ನು ಬಳಸಿಕೊಳ್ಳದೇ ಬ್ಯಾಂಕ್​ನಲ್ಲಿಯೇ ಇಟ್ಟರೇ ಹೇಗೆ? ನಾಳೆ ನಮ್ಮ ಹುಡುಗನ ಕೈಯಲ್ಲಿ, ಕರ್ಪೂರ, ಗಂಧದ ಕಡ್ಡಿ ಕೊಟ್ಟು ಕಳಿಸುತ್ತೇನೆ. ಬ್ಯಾಂಕ್ ಲಾಕರ್​ಗೆ ದಿನಾಲೂ ಪೂಜೆ ಮಾಡಿ ಎಂದು ರೇವಣ್ಣ ವ್ಯಂಗ್ಯವಾಡಿದರು.

Facebook Comments

Sri Raghav

Admin