ದೇವೇಗೌಡರ ಕುಟುಂಬ ಮುಗಿಸೋದು ಹಗಲುಗನಸಷ್ಟೇ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಏ.15- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಮುಗಿಸುವ ಕನಸು ಹಗಲುಗನಸಾಗಿಯೇ ಉಳಿಯಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಹಾಗೂ ದೇವರ ಆಶೀರ್ವಾದ ಇರುವವರೆಗೂ ಯಾರು ಏನೂ ಮಾಡಲು ಸಾಧ್ಯವಿಲ್ಲ. ಕೆಲವರು ನಮ್ಮ ಮೇಲೆ ವೈಯಕ್ತಿಕ ನಿಂದನೆ ಮಾಡುತ್ತಾರೆ ಎಂದ ಅವರು, ಐಟಿ ದಾಳಿಯನ್ನೇ ದಾಳವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಳಿದ ಬಿಲ್ ಪಾಸ್ ಮಾಡಿದರೆ ನಮ್ಮ ವಿರುದ್ಧವೇ ಆಪಾದನೆ ಮಾಡುತ್ತಾರೆ. ರಾಜ್ಯದಲ್ಲಿ ಹೆಚ್ಚು ದಿನ ಇದು ನಡೆಯುವುದಿಲ್ಲ ಎಂದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ರೈತರ 44 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಅವರ ಕೊಡುಗೆ ಏನು? ರೈತರ ಸಾಲಮನ್ನಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಮತ್ತೆ ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಉಳಿಗಾಲವಿಲ್ಲ ಎಂದರು. ಐದು ವರ್ಷ ಅಧಿಕಾರದಲ್ಲಿದ್ದಾಗ ಬಿಜೆಪಿ ಅಭ್ಯರ್ಥಿ ಎ.ಮಂಜು ಹಾಸನ ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ತಿರುಗೇಟು ನೀಡಿದ ರೇವಣ್ಣ, ಬಿಜೆಪಿಯಲ್ಲಿ ಯಾರೂ ಅಭ್ಯರ್ಥಿಗಳು ಇರಲಿಲ್ಲವೆ? ಕಾಂಗ್ರೆಸ್‍ನಿಂದ ವಲಸೆ ಬಂದ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ ಎಂದು ಹಾಸನ ಶಾಸಕರ ವಿರುದ್ಧ ಹರಿಹಾಯ್ದರು.

2ರೂ.ಗೆ ಒಂದು ಕೆಜಿ ಅಕ್ಕಿ ನೀಡಿದ್ದು ದೇವೇಗೌಡರು. ದೇವೇಗೌಡರ ಜಪ ಮಾಡದಿದ್ದರೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು ಶಿವಮೊಗ್ಗದ ಜನರು ಮನೆಗೆ ಕಳುಹಿಸುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿಯನ್ನು ತೊಲಗಿಸಿ ದೇಶ ರಕ್ಷಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

Facebook Comments

Sri Raghav

Admin