ಇಂಜಿನಿಯರಿಂಗ್ ಕಾಲೇಜು ರದ್ದತಿಗೆ ಸರ್ಕಾರದ ಹುನ್ನಾರ : ರೇವಣ್ಣ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14- ರಾಜಕೀಯ ದ್ವೇಷಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರಾದ ಹಾಸನ ಜಿಲ್ಲೆ ಮೊಸಳೆ ಹೊಸಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದ ಇಂಜಿನಿಯರಿಂಗ್ ಕಾಲೇಜನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದರು.

ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಾಖಲಾತಿಗಳನ್ನು ಬಿಡುಗಡೆ ಮಾಡಿ ಶಿಕ್ಷಣದಂತಹ ವಿಷಯಗಳಲ್ಲೂ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ದೇಶದ ರಾಜಕಾರಣಕ್ಕೆ ಹೆದರಿ ಕೂರುವುದಿಲ್ಲ, ಅದನ್ನು ರಾಜಕೀಯವಾಗಿಯೇ ಎದುರಿಸಲು ನಮಗೂ ಗೊತ್ತಿದೆ ಎಂದು ಪ್ರತಿಸವಾಲು ಹಾಕಿದ್ದಾರೆ.

ಮೊಸಳೆ ಹೊಸಹಳ್ಳಿಗೆ 2019-20ನೇ ಸಾಲಿನಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ವಿಶ್ವೇಶ್ವರಯ್ಯ ವಿವಿ ಅನುಮತಿ ನೀಡಿದೆ. ಅಖಿಲ ಭಾರತ ತಾಂತ್ರಿಕ ಪರಿಷತ್ ಕೂಡ ಮಾನ್ಯತೆ ನೀಡಿದೆ. ಈ ವರ್ಷ 173 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅದರಲ್ಲಿ 165 ಮಂದಿಗೆ ಸ್ಕಾಲರ್‍ಶಿಪ್ ಬರುತ್ತಿದೆ. ಇನ್ನು ಐದಾರು ಮಂದಿಯ ಶಿಕ್ಷಣವನ್ನು ಜಿಂದಾಲ್ ಸಂಸ್ಥೆ ಗುತ್ತಿಗೆ ಪಡೆದಿದೆ.

ಸರ್ಕಾರದಿಂದ ಇದರಿಂದ ಯಾವುದೇ ಹೊರೆಯಾಗು ವುದಿಲ್ಲ. ಒಟ್ಟು ವಿದ್ಯಾರ್ಥಿ ಗಳಲ್ಲಿ 80 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಆದಾಗ್ಯೂ ರಾಜ್ಯ ಸರ್ಕಾರ ಕಾಲೇಜು ಅನಗತ್ಯ ಎಂದು ಹೇಳಿ, ಮಾನ್ಯತೆ ರದ್ದು ಮಾಡಲು ಮುಂದಾಗಿದೆ. ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು, ಕಾಲೇಜಿಗಾಗಿ ನಿರ್ಮಾಣವಾಗಿರುವ ಕಟ್ಟಡವನ್ನು ಕೌಶಲ್ಯಾಭಿವೃದ್ಧಿಗೆ ಬಳಸುವಂತೆ ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲ.ಎಲ್ಲರೂ ಸೇರಿ ಕಲ್ಯಾಣ ಕರ್ನಾಟಕ ಕಟ್ಟೋಣ ಎಂದಿದ್ದರು. ಆದರೆ ಈಗ ಬರೀ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಂಜೂರಾಗಿದ್ದ ಯೋಜನೆಗಳು, ಕಾಮಗಾರಿಗಳನ್ನು ರದ್ದು ಮಾಡುತ್ತಿದ್ದಾರೆ. ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ರದ್ದು ಮಾಡಲಾಗಿದೆ. ಬಡವರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಖಾಸಗಿ ಕಾಲೇಜುಗಳು 70 ಲಕ್ಷ ಡೊನೇಷನ್ ಪಡೆಯುತ್ತಿವೆ. ಏಳೂವರೆ ಸಾವಿರ ರೂ.ನಲ್ಲಿ ಶೀಕ್ಷಣ ನೀಡುವ ಇಂಜಿನಿಯರಿಂಗ್ ಕಾಲೇಜು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ದೇವೇಗೌಡರ ಓದಿದಂತಹ ಪಾಲಿಟೆಕ್ನಿಕ್ ಕಾಲೇಜಿನ ಸೀಟುಗಳನ್ನು ಕಡಿಮೆ ಮಾಡಲಾಗುತ್ತಿದೆ. 12 ವರ್ಷದಿಂದ ನಡೆಯುತ್ತಿದ್ದ ಹೊಳೆ ನರಸೀಪುರದಲ್ಲಿ ಪಾಲಿಟೆಕ್ನಿಕ್ ಕಾಲೇಜು ಮುಚ್ಚು ನಿರ್ಧಾರ ನಡೆದಿದೆ. ಬಡವರಬಗ್ಗೆ ಇವರಿಗೆ ಚಿಂತನೆ ಇಲ್ಲ. ಎಷ್ಟಾಗುತ್ತೋ ಅಷ್ಟು ಬಾಚಿಕೊಂಡು ಅಧಿಕಾರದ ಮದ ಅನುಭವಿಸಿ ಮನೆಗೆ ಹೋಗುವ ನಿರ್ಧಾರ ಮಾಡಿದಂತಿದೆ.

ಹಾಸನಕ್ಕೆ ಮಂಜೂರಾಗಿದ್ದ ವಿಮಾನ ನಿಲ್ದಾಣವನ್ನು ನಿರ್ಮಿಸಲು ಹಣವಿಲ್ಲ ಎಂದು ಕೈ ಬಿಡಲಾಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ 280 ಕೋಟಿ ರೂ. ಮಂಜೂರಾತಿ ನೀಡಲಾಗಿದೆ. ಯಡಿಯೂರಪ್ಪ ಕ್ಷೇತ್ರವಾದ ಶಿಕಾರಿಪುರಕ್ಕೆ ಸುಮಾರು 2 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ನೀರಾವರಿ ಇಲಾಖೆಯಲ್ಲಿ ಶೇ.5ರಷ್ಟು ಕಮೀಷನ್ ಪಡೆದು ಕಾಮಗಾರಿ ಬಿಲ್‍ಗಳ ಎನ್‍ಒಸಿ ನೀಡಲಾಗುತ್ತಿದೆ. ಕಾರು ಚಾಲಕರ ಮೂಲಕ ಕಮೀಷನ್ ಪಡೆದುಕೊಳ್ಳುವ ದಂಧೆ ನಡೆಯುತ್ತಿದೆ. ಈ ಎಲ್ಲಾ ಹಗರಣಗಳನ್ನು ವಿಧಾನಸಭೆಯಲ್ಲಿ ಎಳೆ ಎಳೆಯಾಗಿ ಬಿಡಿಸಿಡುತ್ತೇನೆ ಎಂದು ರೇವಣ್ಣ ಹೇಳಿದರು.

ರಾಜ್ಯದಲ್ಲೇ ಹೊಸ ಕಾಲೇಜುಗಳ ಪೈಕಿ ಹೆಚ್ಚು ಜನರಿಗೆ ಪ್ರವೇಶ ನೀಡಿರುವುದರಲ್ಲಿ 3ನೇ ಸ್ಥಾನದಲ್ಲಿರುವ ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿ ಮುಂದುವರೆಸಬೇಕೆಂದು ಅವರು ಒತ್ತಾಯಿಸಿದರು. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

Facebook Comments