ಎಲೆಕ್ಷನ್ ಯಾವಾಗ ಬರುತ್ತೋ ಗೊತ್ತಿಲ್ಲ, ನಾವು ರೆಡಿಯಾಗಿರೋಣ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ಮುಂಬರುವ ವಿಧಾನಸಭೆ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ಆದರೆ, ನಾವು ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮುಂಬರುವ ಗ್ರಾಪಂ ಚುನಾವಣೆ, ಪಕ್ಷದ ಬಲವರ್ಧನೆ ಕುರಿತ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆ 2020 ಅಥವಾ 2023ಕ್ಕೆ ಬರುತ್ತದೆಯೋ ಗೊತ್ತಿಲ್ಲ. ಆದರೆ, ನಾವು ಈಗಿನಿಂದಲೇ ಚುನಾವಣಾ ತಯಾರಿ ಮಾಡಬೇಕಿದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 14 ತಿಂಗಳು ಕೊಡಬಾರದ ಕಿರುಕುಳ ಕೊಟ್ಟರು. ಕುತಂತ್ರ ಮಾಡಿ ಅಕಾರದಿಂದ ಕೆಳಗಿಳಿಸಿದರು. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ ಎಂದರು.
ಕುಮಾರಸ್ವಾಮಿ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರಬಹುದಿತ್ತು.

ಆದರೆ, ಕೆಲವರು ಬೆನ್ನಿಗೆ ಚೂರಿ ಹಾಕಿದರು ಎಂದು ಆರೋಪಿಸಿದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಅವರು ಕ್ಷೇತ್ರದ ಕೆಲಸದ ಕಾರಣಕ್ಕಾಗಿ ಭೇಟಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್, ಬಿಜೆಪಿ ಅಡ್ಜೆಸ್ಟ್‍ಮೆಂಟ್ ಮಾಡಿಕೊಂಡಿವೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗೆ ನಮ್ಮ ಪಕ್ಷ ಮುಗಿಸುವುದೇ ಗುರಿಯಾಗಿದೆ ಎಂದರು.

ಬಿಜೆಪಿಗೆ ಕಳೆದ ಚುನಾವಣೆಯಲ್ಲಿ 105 ಸ್ಥಾನಗಳನ್ನೂ ನಾಡಿನ ಜನರು ಕೊಟ್ಟಿಲ್ಲ. ಇದು ಕಾಂಗ್ರೆಸ್ ಕೊಟ್ಟ ಕೊಡುಗೆಯಾಗಿದೆ. ಕೋಮುವಾದಿಗಳ ವಿರುದ್ಧ ಎಲ್ಲರೂ ಒಗ್ಗೂಡಬೇಕು ಎಂದಿದ್ದಾರೆ. ಆದರೆ, ನಮ್ಮ ಬಿಜೆಪಿ ಬಿ ಟೀಂ ಎಂದು ಟೀಕೆ ಮಾಡುತ್ತಾರೆ.

ಅದೇ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಹಲವು ಸ್ಥಾನಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದವು ಎಂದು ಹೇಳಿದರು.

Facebook Comments

Sri Raghav

Admin