ಸಬ್ ರಿಜಿಸ್ಟರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಬೆವರಿಳಿಸಿದ ಎಚ್.ಡಿ.ರೇವಣ್ಣ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಅಧಿಕಾರಿಗಳು ನಿವೇಶನ ದಾಖಲೆ ವರ್ಗಾ ವಣೆಗೆ ಸಾವಿರಾರು ರೂ. ಹಣವನ್ನು ಪಡೆಯುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಸಬ್ ರಿಜಿಸ್ಟರ್ ಕಛೇರಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ದಿಢೀರ್ ಭೇಟಿ ನೀಡಿದರು.

ಹಾಸನದ ಸಬ್ ರಿಜಿಸ್ಟರ್ ಕಛೇರಿಗೆ ನಿವೇಶನ ರಿಜಿಸ್ಟರ್ ವಿಚಾರವಾಗಿ ಬಂದರೆ ಇಂತಿಷ್ಟು ಜಮೀನಿಗೆ ಸಾವಿರಾರು ರೂ. ಹಣ ನಿಗದಿ ಮಾಡಲಾಗಿದೆ. ಇಲ್ಲಿನ ಅಧಿಕಾರಿಗಳು ಏಜೆಂಟ್‍ರ ಮೂಲಕ ಹಣ ಪಡೆಯುತ್ತಿರುವ ಬಗ್ಗೆ ಪತ್ರಕಾಗೋಷ್ಠಿಗಳಲ್ಲಿ ರೇವಣ್ಣನವರು ಆರೋಪಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಸಬ್ ರಿಜಿಸ್ಟರ್ ಕಛೇರಿಗೆ ದಿಢೀರ್ ಭೇಟಿ ನೀಡುವ ಮೂಲಕ ಇಲ್ಲಿನ ಅಧಿಕಾರಿಗಳಿಗೆ ಶಾಕ್ ನೀಡಿದರು. ಕಛೇರಿ ಒಳಗೆ ಬರುತಿದ್ದಂತೆ ಸಬ್ ರಿಜಿಸ್ಟರ್ ಹಿರಿಯ ಅಧಿಕಾರಿ ಮಧು ಮತ್ತು ಹೆಚ್ಚುವರಿ ಅಧಿಕಾರಿ ರಮೇಶ್ ಕಕ್ಕಾಬಿಕ್ಕಿಯಾದರು.

ಸಾರ್ವಜನಿಕರ ಎದುರೇ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡ ಅವರು ಇನ್ನು ಮುಂದೆ ನಾನು ಇಲ್ಲಿಗೆ ಬಂದಾಗ ಏಜೆಂಟ್ ಗಳು ನನ್ನ ಕಣ್ಣಿಗೆ ಏನಾದರೂ ಕಾಣಿಸಿದರೇ ಇಲ್ಲಿರುವ ಜನರಿಂದಲೇ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.

ಒಂದೊಂದು ನಿವೇಶನಕ್ಕೂ ಬಡ ಜನರಿಂದ ಹಣ ಪಡೆಯುವ ನೀವು ಈ ಹಣವನ್ನು ಶಾಸಕರಿಗೆ ಕೊಡೊದಕ್ಕಾ? ನನ್ನ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿ ಬರುತ್ತವೆ. ಅವರಿಗೆ ಯಾಕೆ ನೀವು ಕೆಲಸ ಮಾಡಿ ಕೊಡುತ್ತಿಲ್ಲ. ನನಗೆ ಯಾವತ್ತು ಹಣ ಕೊಟ್ಟಿಲ್ಲ.

ಮತ್ತೆ ಯಾವ ಶಾಸಕರಿಗೆ ಹಣ ಕೊಡುತ್ತಿದ್ದೀರಾ ? ಪ್ರತಿ ತಿಂಗಳು ನಾಲ್ಕು ಲಕ್ಷ ಕೊಡಬೇಕು ಅಂತಾ ಹಣ ವಸೂಲಿ ಮಾಡುತ್ತಿದ್ದೀರ. ಸರ್ಕಾರಕ್ಕೆ ಕೊಡಲು ವಸೂಲಿ ಮಾಡುತ್ತಿದ್ದೀರ.? ಮತ್ತೆ ಬೇರೆ ಯಾರಿಗೆ ಕೊಡಲು ವಸೂಲಿ  ಮಾಡುತ್ತಿದ್ದೀರಾ ಹೇಳಿ ಎಂದು ತರಾಟೆಗೆ ತೆಗೆದುಕೊಂಡ ಅವರು, ಹಾಗಾದ್ರೆ ನಿಮ್ಮ ಡ್ರಾಯರ್ ಎಲ್ಲ ತೆಗೆಯಿರಿ ಎಷ್ಟೆಷ್ಟು ಹಣ ಇರಬಹುದು ನೋಡೋಣ ಎಂದು ಅಧಿಕಾರಿಗಳಿಗೆ ಕೇಳಿದಾಗ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ.

ಇನ್ನು ರಿಜಿಸ್ಟರ್ ಆಗಿರುವ ಪಟ್ಟಿ ತೋರಿಸಿ, ದಿನಕ್ಕೆ ಎಷ್ಟು ರಿಜಿಸ್ಟರ್ ಮಾಡಲಾಗುತ್ತಿದೆ? ಸಿನಿಯರಿಟಿ ಮೇಲೆ ಮಾಡಲಾಗುತ್ತಿದಿಯಾ? ಇಲ್ಲ ಹಣ ಹೆಚ್ಚು ಕೊಟ್ಟವರ ಮೊದಲು ಆಗುತ್ತಿದಿಯಾ ಬಗ್ಗೆ ರೇವಣ್ಣ ಪ್ರಶ್ನೆ ಮಾಡಿದರು. ದಾಖಲೆ ಪರಿಶೀಲಿಸಿದಾಗ ಸೀನಿಯಾರಿಟಿಯಲ್ಲಿ ರಿಜಿಸ್ಟರ್ ಆಗದ ಬಗ್ಗೆ ಕಿಡಿಕಾರಿದರು.

ಸೀನಿಯಾರಿಟಿ ಬಿಟ್ಟು ಕೆಲಸ ಮಾಡಲು ನಿಮಗೆ ಯಾರು ಹೇಳಿದ್ದು. ಯಾರಾದರೂ ಮನೆಯಲ್ಲಿ ಮದುವೆ ಶುಭ ಕಾರ್ಯಗಳು ಇದ್ದರೇ ಅಂತವರಿಗೆ ಮಾಡಿಕೊಡಿ ಎಂದು ಸಲಹೆ ಕೊಟ್ಟ ಅವರು ಬಡವರ ಹಣ ಪಡೆದು ಶೋಷಣೆ ಮಾಡಬಾರದು ಎಂದರು.

# ಸಚಿವರಿಗೆ ದೂರು:
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ ರೇವಣ್ಣರವರು ಕಛೇರಿಯಲ್ಲಿನ ಅವ್ಯವಸ್ಥೆ ಹಾಗೂ ಅಧಿಕಾರಿಗಳ ವರ್ತನೆ ಬಗ್ಗೆ ದೂರು ನೀಡಿ ಸೂಕ್ತ ಕ್ರಮವಹಿಸುವಂತೆ ಮನವಿ ಮಾಡಿದರಲ್ಲದೇ ಅಲ್ಲೇ ಇದ್ದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.

Facebook Comments

Sri Raghav

Admin