ಕಾಲೇಜು ಆರಂಭಕ್ಕೂ ಮುನ್ನ ಮೂಲಭೂತ ಸೌಕರ್ಯ ಕಲ್ಪಿಸಿ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ನ.3- ರಾಜ್ಯದಲ್ಲಿ ಶಾಲೆ ಕಾಲೇಜು ಆರಂಭಕ್ಕು ಮುನ್ನಾ ಮೂಲಭೂತ ಸೌಕರ್ಯ ಹಾಗೂ ಬೋಧಕ ವರ್ಗದವರನ್ನು ನೇಮಿಸುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ನ.17 ರಿಂದ ರಾಜ್ಯದಲ್ಲಿ ಸರ್ಕಾರ ಪದವಿ ಕಾಲೇಜು ಆರಂಭಕ್ಕೆ ಮುಂದಾಗಿರುವುದು ಸರಿ.ಆದರೆ ಕಾಲೇಜಿಗೆ ಮೂಲಭೂತ ಸೌಕರ್ಯ ಇಲ್ಲಾ ಹಾಗೂ ಎಷ್ಟೋ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದೆ. ಕಾಲೇಜುಗಳಲ್ಲಿ ಪ್ರಯೋಗಾಲಯ – ಕೊಠಡಿಗಳು- ಗ್ರಂಥಾಲಯ ಸೇರಿದಂತೆ ಹಲವು ಕೊರತೆ ಕಾಡುತ್ತಿದೆ.

ಈ ನಡುವೆ ಕಾಲೇಜು ಪ್ರಾರಂಭಿಸಿದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದರು. ಶಿಕ್ಷಣ ಕುರಿತಂತೆ ರಾಜ್ಯ ಸರ್ಕಾರ ಸಲಹೆಗಾರರನ್ನು ನೇಮಿಸಿದೆ ಆದರೆ ಅವರಿಗೆ ಶಿಕ್ಷಣ ಕುರಿತು ಯಾವುದೇ ಅರಿವಿಲ್ಲ. ಖಾಸಗಿ ಇಂಜಿನಿಯರ್ ಕಾಲೇಜಿನ ಒಂದು ಸೀಟಿಗೆ 50-60 ಲಕ್ಷ ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೂಕ್ತ ಸೌಲಭ್ಯ ಇಲ್ಲದೆ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡಯಲಾಗದೆ ವಂಚಿತರಾಗಿದ್ದಾರೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ಈಗ ನೇಮಿಸಿರುವ ಶಿಕ್ಷಣ ತಜ್ಞರು ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೆರವಾಗಲಿದ್ದು ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಆದಷ್ಟು ಶೀಘ್ರ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಂಡು ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಬಹುತೇಕ ಕಾಲೆಜಿನಲ್ಲಿ ಉಪನ್ಯಾಸಕರ ಕೊರತೆ ಇದೆ ಎಚ್.ಡಿ .ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಉಪನ್ಯಾಸಕರ ನೇಮಕ ಹಾಗೂ ಖಾಯಂ ಮಾಡಲಾಗಿದ್ದು ಬಿಟ್ಟರೆ ನಂತರ ಯಾವುದೇ ನೇಮಕಾತಿ ನಡೆದಿಲ್ಲ ಎಂದು ದೂರಿದರು. ಶಿರಾ ಇತಿಹಾಸದಲ್ಲಿ ನೆನ್ನೆ ಪ್ರಚಾರದ ವೇಳೆ ಸೇರಿದಷ್ಟು ಜನ ಎಂದೂ ಕಂಡಿಲ್ಲ. ಈ ಬಾರಿ ಶಿರಾದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಇದೇ ವೇಳೆ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆ ಉಪಾಧ್ಯಕ್ಷರ ಚುನಾವಣೆ ಸಂಬಂಧ ಇಂದು ಸಂಜೆ ದಿನಾಂಕ ನಿಗದಿ ಮಾಡುವುದಾಗಿ ಚುನಾವಣಾ ಅಧಿಕಾರಿ ತಿಳಿಸಿದ್ದರಿಂದ ಪ್ರತಿಭಟನೆ ಹಮ್ಮಿಕೊಂಡಿಲ್ಲ. ಇಂದು ಚುನಾವಣೆ ದಿನಾಂಕ ನಿಗದಿಪಡಿಸದೆ ಇದ್ದಲ್ಲಿ ಪ್ರತಿಭಟನೆ ಹಾದಿ ಹಿಡಿಯಲಾಗುವುದು ಎಂದು ಅವರು ಎಚ್ಚರಿಸಿದರು.

Facebook Comments