ಸರ್ಕಾರ ಕೇವಲ ಹಣ ಹೊಡೆಯುವ ಕಾರ್ಯಕ್ರಮ ಮಾಡುತ್ತಿದೆ : ಹೆಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಡಿ.1- ರಾಜ್ಯ ಬಿಜೆಪಿ ಸರ್ಕಾರ ಕೇವಲ ಹಣ ಹೊಡೆಯುವ ಕಾರ್ಯಕ್ರಮ ಮಾಡುತ್ತಿದ್ದು, ಜಿಲ್ಲಾವಾರು ಒಂದೇ ಟೆಂಡರ್ ಕರೆಯುವ ಮೂಲಕ ಕೋಟ್ಯಾಂತರ ರೂ. ಹಣ ಲೂಟಿ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2020-21ನೆ ಸಾಲಿನಲ್ಲಿ ಶುದ್ಧ ಕುಡಿಯುವ ನೀರೊದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲಾಯ 6 ತಾಲ್ಲೂಕಿನಲ್ಲಿ ಅನುಷ್ಠಾನ ಮಾಡಲು 270 ಕೋಟಿ ರೂ.ಗಳ ಟೆಂಡರ್ ಒಬ್ಬ ವ್ಯಕ್ತಿಗೆ ನೀಡಲಾಗಿದೆ. ಇದರಿಂದ ಅವ್ಯವಹಾರ ನಡೆಯುವುದರೊಂದಿಗೆ ಕಾಮಗಾರಿ ಕಳಪೆಯಾಗಲಿದೆ. ಇದನ್ನು ಪ್ರತಿ ತಾಲ್ಲೂಕಿನಲ್ಲಿ ಟೆಂಡರ್ ಕರೆದಿದ್ದರೆ ಟೆಂಡರ್ ಮೊತ್ತ ಇನ್ನು ಕಡಿಮೆಯಾಗುವುದರೊಂದಿಗೆ ಉತ್ತಮ ಕೆಲಸ ನಡೆಯುತ್ತಿತ್ತು ಎಂದು ಅವರು ಹೇಳಿದರು.

ಜಲ್ ಜೀವನ್ ಯೋಜನೆಗೆ ಹಣ ವರ್ಗಾಯಿಸುವ ಮೂಲಕ ಗ್ರಾಪಂಗೆ ಬರುವ ಅನುದಾನವನ್ನು ಕಡಿತ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಶೇ.15ರಷ್ಟನ್ನು ನೀಡುವ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ. ಆ ಮೂಲಕ ಗ್ರಾಪಂಗೆ ಬರುವ ಅನುದಾನವನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.

ಇದರಿಂದ ಪಂಚಾಯಿತಿ ಸದಸ್ಯರಿಗೆ ಯಾವುದೇ ಕೆಲಸ ಇಲ್ಲದಂತೆ ಮಾಡಲಾಗಿದೆ. ಅಲ್ಲದೆ, ಗ್ರಾಪಂ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ನಾಲ್ಕು ತಿಂಗಳಿಂದ ಸಂಬಳ ಸಹ ಸರ್ಕಾರ ನೀಡಿಲ್ಲ. ಈ ರೀತಿಯ ಕೆಟ್ಟ ಆಡಳಿತವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಆರೋಪಿಸಿದರು.

ಅಲ್ಲದೆ, 2021-22 ನೇ ಸಾಲಿಗೆ 144 ಕೋಟಿ ರೂ.ಗಳ ಜಲ್ ಜೀವನ್ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಸಹ ಕರೆಯಲಾಗಿದ್ದು, ಬೇಲೂರು ಮತ್ತು ಅರಕಲಗೂಡು ತಾಲೂಕನ್ನು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳಿಗೆ ಕಾಮಗಾರಿ ಹಂಚಲಾಗಿದೆ. ಈ ಕಾಮಗಾರಿಯನ್ನು ಸಹ ಒಬ್ಬರಿಗೆ ನೀಡುವ ಮೂಲಕ ದುಡ್ಡು ಹೊಡೆಯುವ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.

ಮಾಜಿ ಸಿಎಂ ಹೆಚ್.ಡಿ .ಕುಮಾರಸ್ವಾಮಿ ಅಕಾರಾವಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ( ಜಲಧಾರ ಯೋಜನೆಯಡಿ)1032 ಕೋಟಿ ರೂ. ಯೋಜನೆಗೆ ಅನುಮೋದನೆ ಸಹ ಪಡೆಯಲಾಗಿತ್ತು. ಆದರೆ, ಅದನ್ನು ಸಹ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ತಡೆಹಿಡಿದು ದ್ವೇಷ ರಾಜಕಾರಣ ಮಾಡಿದೆ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಸರಕಾರ ರೈತ ವಿರೋ ಸರ್ಕಾರವಾಗಿದ್ದು, ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ದೂರಿದರು. ಹಾಸನ ನಗರ ವ್ಯಾಪ್ತಿಯಲ್ಲಿ 6 ಕೆರೆ, 8 ಪಾರ್ಕ್ ನಿರ್ಮಾಣ ಸಂಬಂಧ ಯೋಜನೆ ರೂಪಿಸಲಾಗಿದ್ದು, ಇದು ದೊಡ್ಡ ಫ್ರಾಡ್ ಮಾಡುವ ಕಾರ್ಯಕ್ರಮವಾಗಿದೆ ಎಂದು ಆರೋಪಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರ ಅಕಾರಾವಯಲ್ಲಿ ಚನ್ನಪಟ್ಟಣ ಕೆರೆಯಲ್ಲಿ ಬೋಟಿಂಗ್ ಸೇರಿದಂತೆ ಪಾರ್ಕ್ ನಿರ್ಮಾಣಕ್ಕೆ 88 ಲಕ್ಷ ರೂ.ಗಳ ಟೆಂಡರ್‍ಅನ್ನು ರಾಜಸ್ಥಾನ ಮೂಲದ ಗುತ್ತಿಗೆದಾರರಿಗೆ ನೀಡಲಾಗಿತ್ತು. ಆದರೆ ಯಡಿಯೂರಪ್ಪ ಸರ್ಕಾರ ಇದಕ್ಕೆ ತಡೆಯೊಡ್ಡಿದೆ. ಜಿಲ್ಲಾಯಲ್ಲಿ ಐಐಟಿ ಸ್ಥಾಪನೆಗೆ ಹಾಗೂ ವಿಮಾನ ನಿಲ್ದಾಣ ಕಾಮಗಾರಿಗೆ ಕುಮಾರಸ್ವಾಮಿ ಅವರ ಕಾಲದಲ್ಲಿ ಅನುಮೋದನೆ ದೊರೆತಿದ್ದರೂ ಅದನ್ನು ತಡೆದ ಯಡಿಯೂರಪ್ಪ ಸರ್ಕಾರ ಇದೀಗ ಕೇವಲ 90 ಕೋಟಿ ರೂ.ಗಳಿಗೆ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಲಾಗಿದ್ದು, ದ್ವೇಷ ರಾಜಕಾರಣ ಮಾಡುವುದರಲ್ಲಿ ಯಡಿಯೂರಪ್ಪ ಸರ್ಕಾರ ಜನಪ್ರಿಯತೆ ಪಡೆದಿದೆ ಎಂದು ಆರೋಪಗಳ ಸುರಿಮಳೆಗೈದರು.

ಜಿಲ್ಲಾಯಲ್ಲಿ ರೈತರಿಗೆ ಪರಿಹಾರ ಬಿಡುಗಡೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಗರದ ಒಂದೇ ರಸ್ತೆಯಲ್ಲಿ 26 ಮದ್ಯದ ಅಂಗಡಿಗೆ ಪರವಾನಗಿ ನೀಡುವ ಮೂಲಕ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು. ಗ್ರಾಪಂ ಮದ್ಯದ ಮಾರಾಟ ಜೋರಾಗಿ ನಡೆಯುತ್ತಿದ್ದು ಇದಕ್ಕೆ ಸರ್ಕಾರದ ಬೇಜವಾಬ್ದಾರಿ ನೀತಿಯೇ ಕಾರಣ ಎಂದು ದೂರಿದರು.

ಸೂರಜ್ ಗೆಲುವು ನಿಶ್ಚಿತ: ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ರ್ಪಧಿಸಿರುವ ತಮ್ಮ ಪುತ್ರ ಡಾ.ಸೂರಜ್ ಗೆಲ್ಲುವುದು ನಿಶ್ಚಿತ. ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಭವಾನಿ ರೇವಣ್ಣ ಅವರು ಜಿಪಂನಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಶ್ರೀರಕ್ಷೆಯಾಗಲಿವೆ. ಬಹುತೇಕ ಪಂಚಾಯಿತಿಗಳಲ್ಲಿ ಜೆಡಿಎಸ್ ಸದಸ್ಯರಿದ್ದು, ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಜಾಥಾ ಎಚ್ಚರಿಕೆ: ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಹಾಸನ- ಸಕಲೇಶಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ಕಳಪೆಯಿಂದ ಕೂಡಿದೆ. ಚುನಾವಣೆ ಮುಗಿದ ಬಳಿಕ ದೊಡ್ಡಮಟ್ಟದ ಹೋರಾಟ ನಡೆಸಲಾಗುವುದು ಹಾಗೂ ಸಕಲೇಶಪುರದಿಂದ ಬೆಂಗಳೂರಿನವರೆಗೂ ಜಾಥಾ ನಡೆಸುವ ಮೂಲಕ ಸರ್ಕಾರದ ಕಣ್ತೆರೆಸುವ ಕೆಲಸ ಮಾಡಲಾಗುವುದು ಎಂದರು.

Facebook Comments