ಲಂಕಾ ಸ್ಪೋಟದಲ್ಲಿ ಜೆಡಿಎಸ್ ಕಾರ್ಯಕರ್ತರ ಸಾವು, ಹೆಚ್‌ಡಿಡಿ-ಎಚ್‍ಡಿಕೆ ತೀವ್ರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.22- ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ರಾಜ್ಯದ ನಾಲ್ವರು ಮೃತಪಟ್ಟಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ಹೇಯ ಕೃತ್ಯದಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ಸೂಚಿಸಿರುವ ದೇವೇಗೌಡರು ಬಾಂಬ್ ಸ್ಫೋಟದ ಸಂದರ್ಭದಲ್ಲಿ ಗಾಯಗೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲಿ.

ಕಣ್ಮರೆಯಾಗಿರುವ ಕನ್ನಡಿಗರು ಹಾಗೂ ಭಾರತೀಯರು ಶೀಘ್ರ ಸುರಕ್ಷಿತವಾಗಿ ಮರಳುವಂತಾಗಲಿ ಪ್ರಾರ್ಥಿಸಿದ್ದಾರೆ. ಭಯೋತ್ಪಾದಕರ ಬಾಂಬ್ ಸ್ಫೋಟದಲ್ಲಿ 200ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿರುವ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಸಂತಾಪ ಸೂಚನೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಮೃತಪಟ್ಟವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬದ ಬೆಂಬಲಕ್ಕೆ ನಾವಿದ್ದು, ಭಗವಂತನು ಮೃತರ ಕುಟುಂಬ ವರ್ಗದವರಿಗೆ ಈ ಆಘಾತದ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಜೆಡಿಎಸ್‍ನ ಏಳು ಮಂದಿ ತಂಡ ನಾಪತ್ತೆಯಾಗಿದ್ದು, ಅವರಲ್ಲಿ ನಾಲ್ವರು ಮೃತಪಟ್ಟಿರುವುದು ದೃಢಪಟ್ಟಿದೆ. ಇದು ಅತ್ಯಂತ ದುಃಖಕರ ಸಂಗತಿ ಎಂದರು.
ಉಳಿದ ಮೂವರು ಇದುವರೆಗೂ ಪತ್ತೆಯಾಗಿಲ್ಲ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯು, ದೆಹಲಿಯ ಕರ್ನಾಟಕ ಭವನ, ಮೃತಪಟ್ಟವರ ಮತ್ತು ಕಾಣೆಯಾದವರೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಕೊಲಂಬೋ ಪ್ರವಾಸದಲ್ಲಿದ್ದ ಜೆಡಿಎಸ್‍ನ ಕಾರ್ಯಕರ್ತರು ನಾಪತ್ತೆಯಾಗಿದ್ದು, ಅವರ ಪತ್ತೆ ಕುರಿತಂತೆ ಭಾರತದ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ