ನೆರೆ ಸಂತ್ರಸ್ತರಿಗೆ ನೆರವು ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ : ಹೆಚ್‌ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.28- ರಾಜ್ಯದ ಬಹುತೇಕ ಜಿಲ್ಲೆಗಳು ಕಳೆದ ಎರಡು ವರ್ಷಗಳಿಂದ ನೆರೆ ಹಾವಳಿಯಿಂದ ತತ್ತರಿಸಿದ್ದು, ರಾಜ್ಯ ಸರ್ಕಾರವು ನೊಂದವರಿಗೆ ಅಗತ್ಯ ನೆರವು ಹಾಗೂ ಸೌಲಭ್ಯ ಕಲ್ಪಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆರೋಪಿಸಿದರು.

ಉತ್ತರ ಕರ್ನಾಟಕ ಭಾಗದ ನೆರೆ ಹಾವಳಿಯಿಂದ ಉಂಟಾಗಿರುವ ಸಮಸ್ಯೆ, ಪರಿಹಾರ ಕಾರ್ಯಗಳ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಮಾತನಾಡಿದ ಅವರು, ಕೊರೊನಾದ ಇಂತಹ‌ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ‌ ನೀಡಿ ವಸ್ತು ಸ್ಥಿತಿ ಯನ್ನು ಅರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವೀಡಿಯೋ ಸಂವಾದವನ್ನು ಏರ್ಪಡಿಸಲಾಗಿದೆ.

ಕಳೆದ ವರ್ಷದ ನೆರೆ ಹಾವಳಿಗೆ ಘೋಷಿಸಿದ್ದ ಪರಿಹಾರ ಇಂದಿಗೂ ಕೂಡ ನೀಡಿಲ್ಲ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಸ್ಪಂದಿಸುತ್ತಿಲ್ಲ ಎಂದು ಎಲ್ಲ ಜಿಲ್ಲೆಯ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಈ ಬಗ್ಗೆ ಸರ್ಕಾರದ ಗಮನಕ್ಕೆ ನಾನೆ ಖುದ್ದು ಮಾಹಿತಿ ಕೊಡುತ್ತೇನೆ ಎಂದರು. ಕೊರೋನಾ ಕಡಿಮೆಯಾದ ನಂತರ ಬಹುತೇಕ ಎಲ್ಲ ಜಿಲ್ಲೆಗಳಿಗೆ ನಾನು ಮತ್ತು ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ರೈತರ ಕಷ್ಟಕ್ಕೆ ಪರಿಹಾರ ಸೂತ್ರದ ಜೊತೆಗೆ ಪಕ್ಷ ಸಂಘಟನೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಒಂದು ವರ್ಷದಲ್ಲಿ ಸರ್ಕಾರ ರೈತರಿಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಇದರ ಬಗ್ಗೆ ನಮ್ಮ ಪಕ್ಷದ ಮುಖಂಡರ ಜೊತೆ ಸೇರಿ ಹೋರಾಟಕ್ಕೆ ಇಳಿಯುತ್ತೇವೆ.

ನನ್ನ ಕಾಲದಲ್ಲಿ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ನಮ್ಮ ಮುಖಂಡರು ಹಳ್ಳಿ ಹಳ್ಳಿ ಗಳಲ್ಲಿ ಮನವರಿಕೆ ಮಾಡಿಕೊಡಲಿದ್ದಾರೆ. ಸರ್ಕಾರ ತಕ್ಷಣ ಪರಿಹಾರ ಕೈಗೆತ್ತಿಕೊಳ್ಳಬೇಕೆಂದು ಮಾಧ್ಯಮಗಳ ಮುಕೇನ ಆಗ್ರಹಿಸುತ್ತೇನೆ ಎಂದರು.

ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ತಾಲೂಕಿನ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಯಿತು.

ರಾಜ್ಯದ ಬಹುತೇಕ ಜಿಲ್ಲೆಗಳು ಕಳೆದ ಎರಡು ವರ್ಷಗಳಿಂದ ನೆರೆ ಹಾವಳಿಯಿಂದ ತತ್ತರಿಸಿದ್ದು ಸರ್ಕಾರವು ನೊಂದವರಿಗೆ ಅಗತ್ಯ ನೆರವು ಹಾಗೂ ಸೌಲಭ್ಯ ಕಲ್ಪಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

ಕೊರೊನಾದಂತಹ‌ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ‌ ನೀಡಿ ವಸ್ತು ಸ್ಥಿತಿಯನ್ನು ಅರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವೀಡಿಯೋ ಸಂವಾದವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ‌ ಕುಮಾರಸ್ವಾಮಿಯವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಕೆ ಕುಮಾರಸ್ವಾಮಿಯವರು ಉಪಸ್ಥಿತರಿದ್ದರು.

Facebook Comments

Sri Raghav

Admin