ಡ್ರಗ್ಸ್ ದಂಧೆಯಲ್ಲಿ ಸರ್ಕಾರದಲ್ಲಿ ಇರುವವರು ಇರಬಹುದು : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17-ಡ್ರಗ್ಸ್ ದಂಧೆಯ ಬಗ್ಗೆ ದೊಡ್ಡ ಮಟ್ಟದ ತನಿಖೆಯಾದರೆ ಮಾತ್ರ ತಾರ್ಕಿಕ ಅಂತ್ಯ ದೊರೆಯಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲದಿದ್ದರೆ ಇನ್ನು 15 ದಿನದಲ್ಲಿ ಇದು ಕೂಡ ಕೋಲ್ಡ್ ಸ್ಟೋರೇಜ್ ಸೇರಿ ಸತ್ತು ಹೋಗಲಿದೆ ಎಂದರು. ದಂಧೆಯಲ್ಲಿ ಕೇವಲ ಕೆಲವರ ಹೆಸರಷ್ಟೇ ಪ್ರಸ್ತಾಪವಾಗುತ್ತಿದೆ. ಸರ್ಕಾರದಲ್ಲಿ ಇರುವವರು ಇರಬಹುದು ಎಂದು ಹೇಳಿದರು.

ನಿಜವಾಗಿ ಯಾರು ಪಾಪದ ಹಣವನ್ನು ದಂಧೆಯಲ್ಲಿ ತೊಡಗಿಸಿದ್ದಾರೋ ಅದರ ಬಗ್ಗೆ ತನಿಖೆ ನಡೆಸಿದರೆ ತಾರ್ಕಿಕ ಅಂತ್ಯ ದೊರೆಯಬಹುದು. ತಡರಾತ್ರಿಯವರೆಗೂ ನಡೆಯುವ ಡಾನ್ಸ್ ಬಾರ್‍ಗಳು ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವವರ ಹಣದಿಂದ ಮೈತ್ರಿ ಸರ್ಕಾರ ಪತನವಾಯಿತು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ತಾವು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಮತ್ತಿನಲ್ಲಿ ಮಲಗಿರಲಿಲ್ಲ. ಕ್ರಿಕೆಟ್ ಬೆಟ್ಟಿಂಗ್ ದಂಧೆ ಹಾಗೂ ಡ್ಯಾನ್ಸ್ ಬಾರ್‍ಗಳಲ್ಲಿ ನಡೆಯುವ ಅಕ್ರಮಗಳನ್ನು ಮಟ್ಟ ಹಾಕಲು ನಿರ್ದೇಶನ ನೀಡಿ ಗಂಭೀರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.

ನಂತರ ವ್ಯಕ್ತಿಯೊಬ್ಬರು ಶ್ರೀಲಂಕಾಕ್ಕೆ ಹೋಗಿದ್ದರು. ಶಾಸಕರು ಬಾಂಬೆಗೆ ಹೋಗುವಾಗ ಅವರ ಜೊತೆಯಲ್ಲಿ ಆ ವ್ಯಕ್ತಿಯಿದ್ದ. ಫೋಟೋವನ್ನು ಸದನದಲ್ಲೇ ತೋರಿಸಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಯಲ್ಲಿ 20 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಒಂದು ಕೋಟಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶಕ್ಕೆ ಎದುರಾಗಿರುವ ಆಪತ್ತುಗಳನ್ನು ನಿವಾರಿಸಲಿ ಎಂದು ಆಶಿಸಿದರು.

ಪ್ರಧಾನಿಯವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತೇನೆ ಎಂದಿರುವ ಅವರು, ಹುಟ್ಟಹಬ್ಬದ ಅಂಗವಾಗಿ ಅಭಿಯಾನ ಕೈಗೊಂಡಿರುವರು. ನಿರುದ್ಯೋಗ ತೊಡೆದು ಹಾಕುತ್ತಾರೆಯೋ ಅಥವಾ ಯಾರೂ ಕೆಲಸವನ್ನೇ ಕೇಳಬಾರದೆಂದು ಮಾಡುತ್ತಾರೆಯೋ ಎಂದು ಪ್ರಶ್ನಿಸಿದರು.

ಮುಂಬರುವ ಅವೇಶನದಲ್ಲಿ ಡ್ರಗ್ಸ್ ದಂಧೆ ವಿಚಾರ, ಡಿಜೆಹಳ್ಳಿ ಘಟನೆಗಿಂತ ರೈತರ, ಉದ್ಯೋಗ ಕಳೆದುಕೊಂಡವರ ವಿಚಾರ, ಕೈಗಾರಿಕೆ ಬೆಳವಣಿಗೆ ಕುಸಿತ, ಮನೆ ಹಂಚಿಕೆ ವಿಚಾರದ ಚರ್ಚೆಗೆ ಒತ್ತು ನೀಡಲಾಗುವುದು ಎಂದರು.

Facebook Comments

Sri Raghav

Admin