ಕಿಕ್‌ಬ್ಯಾಕ್‌ ಆರೋಪದ ಕುರಿತು ತನಿಖೆಯಾಗಬೇಕು : HDK ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.19- ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ಮಾಡಿರುವ 2000 ಕೋಟಿ ರೂ. ನೀರಾವರಿ ಇಲಾಖೆಯ ಕಿಕ್‌ಬ್ಯಾಕ್‌ ಆರೋಪವನ್ನು ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳೆದ 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ನನ್ನ ವಿರುದ್ಧ ಬಿಜೆಪಿ ನಾಯಕರೇ 150 ಕೋಟಿ ರೂ. ಗಣಿ ಲಂಚ ಆರೋಪ ಮಾಡಿದ್ದರು. ಸರ್ಕಾರದ ಪಾಲುದಾರ ಪಕ್ಷದವರೇ ದೂರಿದ್ದರಿಂದ ನಾನು ಅದನ್ನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ ಕಾದುಕೊಂಡಿದ್ದೆ.

ಈಗಿನ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ 2000ಕೋಟಿ ರೂ. ನೀರಾವರಿ ಇಲಾಖೆಯ ಕಿಕ್‌ಬ್ಯಾಕ್‌ ಆರೋಪ ಮಾಡಿದ್ದಾರೆ.ಈಗ ತನಿಖೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ‌.

ಈ ಭ್ರಷ್ಟಾಚಾರದ ಆರೋಪದಲ್ಲಿ ಅನ್ಯರ ಹಸ್ತಕ್ಷೇಪದ ಆರೋಪವಿದೆ. ಆಡಳಿತದಲ್ಲಿ, ಅದೂ ಸರ್ಕಾರದ ಹಂತದಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜನರ ಸೇವೆಯಲ್ಲಿ ತೊಡಗಿರುವ ಸರ್ಕಾರದಲ್ಲಿ ಸಂಬಂಧವೇ ಇಲ್ಲದವರ ಹಸ್ತಕ್ಷೇಪ ಸರಿಯಲ್ಲ. ಹೀಗಾಗಿ ಅನ್ಯರ ಹಸ್ತಕ್ಷೇಪದ ವಿಚಾರದಲ್ಲಿಯೂ ಗಂಭೀರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಕ್ಷಸ ಸರ್ಕಾರವೊಂದನ್ನು ಕೆಡವಿ ಅತ್ಯಂತ ಸಜ್ಜನ, ಸ್ವಚ್ಛ ಸರ್ಕಾರವನ್ನು ಪ್ರತಿಷ್ಠಾಪಿಸಿದವರೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯು ಕಳೆದ 2006ರಲ್ಲಿ ನಾನು ಇಟ್ಟಂಥ ಹೆಜ್ಜೆಯನ್ನೇ ಇಟ್ಟು ತಾವು ಪ್ರಾಮಾಣಿಕ ಎಂಬುದನ್ನು ಸಾಬೀತು ಮಾಡಬೇಕು. ಹೀಗಾಗಿ ಕೂಡಲೇ ಆರೋಪವನ್ನು ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Facebook Comments

Sri Raghav

Admin