ವಿಸಿಟಿಂಗ್ ಕಾರ್ಡ್ ನಾಯಕರಿಗೆ ಜಾಗ ಇಲ್ಲ : ಜಿಟಿಡಿಗೆ ಎಚ್‍ಡಿಕೆ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಜ.20- ಕೆಲಸ ಮಾಡುವವರನ್ನು ಬಿಟ್ಟು, ಕೇವಲ ವಿಸಿಟಿಂಗ್ ಕಾರ್ಡ್‍ಗೆ ಹೆಸರು ಹಾಕಿಸಿಕೊಳ್ಳುವವರನ್ನು ಕೋರ್‍ಕಮಿಟಿಗೆ ಸೇರಿಸಿಕೊಳ್ಳಲಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕ ಜಿ.ಟಿ.ದೇವೇಗೌಡರಿಗೆ ಟಾಂಗ್ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಸ್ವಕ್ಷೇತ್ರಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೋರ್‍ಕಮಿಟಿಗೆ ಆಯ್ಕೆಮಾಡುವಾಗ ವಯಸ್ಸನ್ನು ಪರಿಗಣಿಸಿಲ್ಲ. ಅವರಿಗಿಂತÀ ವಯಸ್ಸಾಗಿರುವ ಹೊರಟ್ಟಿ ಅವರು ಕಮಿಟಿಯಲಿಲ್ಲವೇ..? ಉತ್ಸಾಹ ನೋಡಿ ಮುಖಂಡರಿಗೆ ಜವಾಬ್ದಾರಿ ವಹಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನನಗೆ ಪಕ್ಷ ಸಂಘಟನೆಯ ಬಗ್ಗೆ ಆಸಕ್ತಿಯಿಲ್ಲ, ನನ್ನ ಕ್ಷೇತ್ರ ಮುಖ್ಯ, ಪಕ್ಷ ಸಂಘಟನೆಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಈಗ ಅವರಿಗೆ ಕ್ಷೇತ್ರದ ಬಗ್ಗೆ ಗಮನಬಂದಿದೆ ಎಂದು ಲೇವಡಿ ಮಾಡಿದರು. ನಮ್ಮ ಪಕ್ಷದ ಕಚೇರಿ ಜೆ.ಪಿ ಭವನದ ಬಾಗಿಲು, ನಮ್ಮ ಎಚ್.ಡಿ.ದೇವೇಗೌಡರ ಮನೆಬಾಗಿಲು ಸದಾ ತೆಗೆದಿರುತ್ತದೆ ಅವರು ಯಾವಾಗಲಾದರೂ ಬಂದು ಚರ್ಚಿಸಲಿ, ಅದನ್ನು ಬಿಟ್ಟು ಮಾಧ್ಯಮಗಳ ಮೂಲಕ ನನಗೆ ಸಂದೇಶ ಕೊಡೋದು ಬೇಡ ಎಂದು ಎಚ್ಚರಿಸಿದರು.

ಕೆಲವರಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಹಿತಕ್ಕಿಂತ ಸ್ವಂತ ಹಿತ ಮುಖ್ಯ. ತಮ್ಮ ಸ್ಥಾನಮಾನಗಳು ಮುಖ್ಯ. ಮುಂದಿನ ಚುನಾವಣೆ ಬಂದಾಗ ಯಾರ್ಯಾರು ಎಲ್ಲಿರುತ್ತಾರೋ ಗೊತ್ತಿಲ್ಲ.ಕಾರ್ಯಕರ್ತರ ಶ್ರಮ, ಕಷ್ಟಸುಖದ ಬಗ್ಗೆ ಯಾರಿಗೂ ಅರಿವಿಲ್ಲ.ನಾವು ಕಾರ್ಯಕರ್ತರನ್ನ ನಂಬಿ ರಾಜಕಾರಣ ಮಾಡ್ತೇವೆ ಮುಖಂಡರನ್ನು ನಂಬಿ ರಾಜಕಾರಣ ಮಾಡುವುದಿಲ್ಲ. ನಮ್ಮ ಪಕ್ಷದಲ್ಲಿ ಮಾತ್ರವಲ್ಲ ಎಲ್ಲಾ ಪಕ್ಷದಲ್ಲೂ ಇಂತಹ ವ್ಯಕ್ತಿಗಳು ಇರುತ್ತಾರೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷರ ಬದಲಾವಣೆ: ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಕಾರಕ್ಕೆ ತರುವ ಹಿನ್ನೆಲೆಯಲ್ಲಿ ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸಲು ಮುಂದಾಗಿದ್ದು, ಈಗಾಗಲೇ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ವಜಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ವಿವರಿಸಿದರು.

ಲೆಟರ್‍ಹೆಡ್ ಇಟ್ಟುಕೊಂಡು ಅಕಾರಿಗಳ ಬಳಿ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರೇ ಮಾತನಾಡುತ್ತಿದ್ದಾರೆ. ಇದೀಗ ಮಂತ್ರಿಯಾಗಿದ್ದಾರೆ ಇದನ್ನು ಪಗರ್‍ದಸ್ತಾಗಿ ಮಾಡಲು ಅವಕಾಶ ಸಿಕ್ಕಂತಾಗಿದೆಯಲ್ಲವೇ ಎಂದು ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪ್ರಾಮಾಣಿಕ ಅಕಾರಿಗಳ ಮೂಲಕ ಈ ಕ್ಷೇತ್ರದಲ್ಲಿ ಕೆಲಸ ಮಾಡಿಸಿ ಅವರೇ ಹೆಸರು ಪಡೆಯಲಿ ಬೇಡ ಎಂದವರು ಯಾರು, ಅದನ್ನು ಬಿಟ್ಟು ಅಮಾಯಕ ಜನರ ಜೇಬಿಗೆ ಕೈ ಹಾಕುವುದು ಬೇಕಿಲ್ಲ ಎಂದು ಎಚ್ಚರಿಸಿದರು. ಯೋಗೇಶ್ವರ್ ನನಗೂ ಸ್ನೇಹಿತರೇ: ಯೋಗೇಶ್ವರ್ ವಯಕ್ತಿಕವಾಗಿ ನನಗೂ ಸ್ನೇಹಿತರು.

ಆದರೆ, ಕಾರ್ಯಕರ್ತರ ಕುತ್ತಿಗೆ ಕೂಯ್ದು ಸ್ನೇಹ ಉಳಿಸಿಕೊಳ್ಳಲು ಆಗಲ್ಲ ವಯಕ್ತಿಕ ಸ್ನೇಹ ಬೇರೆ, ರಾಜಕೀಯ ಬೇರೆ ಯಡಿಯೂರಪ್ಪನವರು ನನಗೆ ಸ್ನೇಹಿತರು, ಹಾಗೆಂದ ಮಾತ್ರಕ್ಕೆ ಎಲ್ಲದರಲ್ಲೂ ಸ್ನೇಹವಿಲ್ಲ. ರಾಜಿಕೀಯ ಹೋರಾಟವೇ ಬೇರೆ, ನನ್ನ ಕಾರ್ಯಕರ್ತರಿಗಾಗಿ ನಾನು ರಾಜಕೀಯ ಹೋರಾಟ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡ ಹಾಪ್‍ಕಾಮ್ಸ್ ದೇವರಾಜು, ವಕೀಲ ಪೌಳಿದೊಡ್ಡಿ ಹನುಮಂತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Facebook Comments

Sri Raghav

Admin