ಸೋಲುವ ಭೀತಿಯಿಂದ ಹಣ ಹಂಚುತ್ತಿರುವ ಡಿಸಿಎಂ : ರೇವಣ್ಣ ಗಂಭೀರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವ ದೃಷ್ಟಿಯಿಂದ ಸ್ವತಃ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಕೆ ಆರ್ ಪೇಟೆ ಕ್ಷೇತ್ರದಲ್ಲಿ ಪೊಲೀಸರ ಮೂಲಕ ಹಣ ಹಂಚಿಕೆ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯ ವಿಧಾನ ಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂಬ ಕಾರಣದಿಂದ 15 ಕ್ಷೇತ್ರದಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ.

ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಕೆ ಆರ್ ಪೇಟೆ ಹಾಗೂ ಹುಣಸೂರು ಕ್ಷೇತ್ರದಲ್ಲಿ ಸ್ವತಃ ಲಾಡ್ಜ್ ಗಳಲ್ಲಿ ಬೀಡುಬಿಟ್ಟು ಪೊಲೀಸರ ಮೂಲಕ ಹಣ ಹಂಚಿಕೆ ಮಾಡಿಸುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದರು . ಐಜಿ( ಪೊಲೀಸ್ ಮಹಾನಿರ್ದೇಶಕ) ಅವರು ಕೆ ಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ಅಧಿಕಾರ ಚಲಾಯಿಸಿ ಅಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ಮೂಲಕ ಹಣ ಹಂಚಿಕೆ ಮಾಡುತ್ತಿದ್ದಾರೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ನನ್ನ ಮಗ ಸೂರಜ್ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ನಂಬಿ ಹಳ್ಳಿಯಲ್ಲಿ ಘಟನೆ ನಡೆದಾಗ ಸೂರಜ್ ಅವರು ಆ ಸ್ಥಳದಲ್ಲಿ ಇರಲಿಲ್ಲ ಆದರೆ ಪೊಲೀಸ್ ಮಹಾನಿರ್ದೇಶಕರು ನಿರ್ದೇಶನ ನೀಡಿ ಸೂರಜ್ ಅವರ ಮೇಲೆ ಕೇಸು ದಾಖಲಿಸಲು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿರುವ ಪೊಲೀಸ್ ಮಹಾನಿರ್ದೇಶಕರು ಸುಳ್ಳು ದೂರು ದಾಖಲಿಸಲು ತಮ್ಮ ಹುದ್ದೆಯೊಂದಿಗೆ ಹೆಡ್ ಕಾನ್ಸ್ಟೇಬಲ್ ಹುದ್ದೆಯನ್ನು ನಿರ್ವಹಿಸಲಿ ಎಂದು ಟೀಕಿಸಿದ ರೇವಣ್ಣ ಈ ಬಗ್ಗೆ ಡಿಜೆ ಅವರಿಗೆ ದೂರು ನೀಡಲಾಗುವುದು ಎಂದರು. ಪ್ರಕರಣ ಸಂಬಂಧ ನಮಗೆ ನ್ಯಾಯ ದೊರಕದಿದ್ದಲ್ಲಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಜೆಡಿಎಸ್ ಶಾಸಕರೊಂದಿಗೆ ಧರಣಿ ಕೂರುವುದಾಗಿ ಎಚ್ಚರಿಸಿದ ಅವರು ಚುನಾವಣೆ ಮುಗಿದ ಮರುದಿನ ಧರಣಿ ಕೈಗೊಳ್ಳುವುದಾಗಿ‌ ತಿಳಿಸಿದರು.

ಉಪಚುನಾವಣೆಯ 15 ಕ್ಷೇತ್ರದಲ್ಲಿಯೂ ಬಿಜೆಪಿ ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದ ರೇವಣ್ಣ ಸೋಲಿನ ಹತಾಶೆಯಿಂದ ಮತದಾರರನ್ನು ಸೆಳೆಯಲು ಹಣದ ಆಮಿಷ ಒಡ್ಡುತ್ತಿದ್ದಾರೆ ಇದಕ್ಕೆಲ್ಲ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ ಇದನ್ನೆಲ್ಲ ಗಮನಿಸದ ಸರ್ಕಾರ ಹಾಗೂ ಮುಖ್ಯಮಂತ್ರಿ ತಮ್ಮ ಹೊಟ್ಟೆಪಾಡಿಗಾಗಿ ಉಪ ಚುನಾವಣೆಯ ಕಣದಲ್ಲಿ ಸುತ್ತಾಡುತ್ತಿದ್ದಾರೆ ಜನರ ಬಗ್ಗೆ ಈ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂದು ದೂರಿದರು. ಈ ವೇಳೆ ಹುಡಾ‌ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ, ಜಿ.ಪಂ.ಉಪಾಧ್ಯಕ್ಷ ಸ್ವರೂಪ್ ಇತರರು ಇದ್ದರು.

Facebook Comments

Sri Raghav

Admin