ನೂತನ ಶಾಸಕರಿಗೆ ಇಂದೂ ಕೂಡ ‘ಹೆಡ್‍ಮಾಸ್ಟರ್’ ಪಾಠ

ಈ ಸುದ್ದಿಯನ್ನು ಶೇರ್ ಮಾಡಿ

Ramesh Kumarಬೆಳಗಾವಿ (ಸುವರ್ಣಸೌಧ), ಡಿ.12- ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಇಂದು ಸ್ಪೀಕರ್ ರಮೇಶ್‍ಕುಮಾರ್ ಅವರು ಹೆಡ್‍ಮಾಸ್ಟರ್ ರೀತಿ ಹೊಸ ಶಾಸಕರಿಗೆ ಪಾಠ ಮಾಡಿದರು. ಬೇಜವಾಬ್ದಾರಿಯ ಪದ ಬಳಕೆಗಾಗಿ ವಿಧಾನಸಭೆ ಸಚಿವಾಲಯದ ಅಧಿಕಾರಿಗಳನ್ನು ಕಲಾಪದಲ್ಲೇ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಸ ವಿಲೇವಾರಿ ಅವ್ಯವಹಾರದ ಬಗ್ಗೆ ಶಾಸಕ ಮುನಿರತ್ನ ಅವರು ಪ್ರಶ್ನೆ ಕೇಳಿ ಹಗರಣದ ಪ್ರಮುಖ ರೂವಾರಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು. ಅದಕ್ಕೆ ಉತ್ತರ ನೀಡುವಾಗ ಸಚಿವಾಲಯದ ಸಿಬ್ಬಂದಿಗಳು ರೂವಾರಿ ಎಂಬ ಪದವನ್ನು ಯಥಾವತ್ತಾಗಿ ಬಳಸಿದರು. ಇದರಿಂದ ಸಿಟ್ಟಾದ ಸ್ಪೀಕರ್, ರೂವಾರಿ ಎಂಬ ಪದ ಅತ್ಯಂತ ಗೌರವ ಸೂಚಕವಾದದ್ದು, ಅದನ್ನು ತಪ್ಪು ಮಾಡಿದವರಿಗೆ ಬಳಸಿದ್ದೀರಾ ನಿಮಗೆ ಪ್ರಜ್ಞೆ ಇಲ್ಲವೆ ? ಶಾಸಕರು ಪ್ರಶ್ನೆ ಕೇಳುವಾಗ ವ್ಯಂಗ್ಯವಾಗಿ ಹೇಳಿರಬಹುದು. ಅಧಿಕಾರಿಗಳಿಗೆ ಕನ್ನಡ ಗೊತ್ತಿಲ್ಲವೇ ? ಬುದ್ದಿ ಇರಬೇಕಲ್ಲವೆ ? ಪದಗಳ ಬಳಕೆ, ವಾಕ್ಯ ರಚನೆ ಬಗ್ಗೆ ಜಾಗೃತ ತಂಡ ಇರಬೇಕು. ಇದು ಕೊನೆಯ ಎಚ್ಚರಿಕೆ ಮುಂದೆ ಇದೇ ರೀತಿ ಆದರೆ ತಪ್ಪು ಮಾಡಿದವರು ಬೆಲೆ ತೆತ್ತಬೇಕಾಗುತ್ತದೆ ಎಂದು ಖಾರವಾಗಿ ಎಚ್ಚರಿಸಿದರು.

ಸ್ಪೀಕರ್ ಅವರ ಕೋಪ ಅಧಿವೇಶನದಲ್ಲಿ ಒಂದು ಕ್ಷಣ ನೀರವ ಮೌನ ಆವರಿಸುವಂತೆ ಮಾಡಿತು. ಇದಕ್ಕೂ ಮುನ್ನ ಕುಮುಟಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅವರು ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದರು. ಅದಕ್ಕೆ ಅಧಿವೇಶನದಲ್ಲಿ ಉತ್ತರವನ್ನೂ ನೀಡಲಾಗಿತ್ತು. ಪೌರಾಡಳಿತ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಬದಲಾಗಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಉತ್ತರ ನೀಡಿದರು. ಆದರೆ, ಉಪ ಪ್ರಶ್ನೆ ಕೇಳುವಾಗ ಮೊದಲ ಬಾರಿಗೆ ಆಯ್ಕೆಯಾಗಿದ್ದ ಶಾಸಕ ದಿನಕರ್ ಶೆಟ್ಟಿ ಅವರು ತಬ್ಬಿಬ್ಬಾದರು. ತಾವು ಕೇಳಿದ ಲಿಖಿತ ಪ್ರಶ್ನೆಯನ್ನೇ ಓದಲು ಆರಂಭಿಸಿದರು. ಆಗ ಸ್ಪೀಕರ್ ಅವರು ಹೊಸ ಶಾಸಕರಿಗೆ ಶಾಸಕಾಂಗ ಸಭೆಯಲ್ಲಿ ಹಿರಿಯರು ಮಾರ್ಗದರ್ಶನ ಮಾಡಬೇಕು. ಸುರೇಶ್‍ಕುಮಾರ್ ಅವರಂಥ ಹಿರಿಯರು ಸೂಕ್ತ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಶಾಸಕ ಮಾಧುಸ್ವಾಮಿ ಅವರು ದಿನಕರ್‍ಶೆಟ್ಟಿ ಅವರ ಪಕ್ಕ ಕುಳಿತು ಪ್ರಶ್ನೆ ಕೇಳುವ ರೀತಿ ಹೇಳಿಕೊಡುತ್ತಿದ್ದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಆಗ ಹೊಸ ಶಾಸಕರಿಗೆ ಇನ್ನಷ್ಟು ಧೈರ್ಯ ತುಂಬಿದ ಸ್ಪೀಕರ್, ಆತಂಕ ಪಡಬೇಡಿ, ನಿಮ್ಮ ಬಗ್ಗೆ ಸದನದಲ್ಲಿ ಗೌರವವಿದೆ, ಸಮಾಧಾನವಾಗಿ ಪ್ರಶ್ನೆ ಕೇಳಿ ಎಂದರು. ಕೊನೆಗೆ ದಿನಕರ್ ಶೆಟ್ಟಿ ಅವರು ಕಡಲ ಕೊರೆತ ದಿನೇ ದಿನೇ ಹೆಚ್ಚಾಗುತ್ತಿದೆ. ಲಕ್ಷಾಂತರ ಮನೆಗಳು ಕೊಚ್ಚಿ ಹೋಗುತ್ತಿವೆ. ಸರ್ಕಾರ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ ಎಂದಾಗ, ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಶಿವಶಂಕರ್‍ರೆಡ್ಡಿ, ಹೆಚ್ಚುವರಿ ಅನುದಾನಕ್ಕಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಅಂಗೀಕಾರಗೊಂಡ ನಂತರ ಹೆಚ್ಚುವರಿ ಅನುದಾನ ನೀಡುವುದಾಗಿ ಸಮಜಾಯಿಸಿ ನೀಡಿದರು.

Facebook Comments