“ನನ್ನನ್ನು ಡಿಸಿಎಂ ಮಾಡು ತಾಯಿ” : ಗಡೇ ದುರ್ಗಾದೇವಿಗೆ ಶ್ರೀರಾಮುಲು ಹರಕೆ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ನನ್ನನ್ನು ಕರ್ನಾಟಕದ ಉಪಮುಖ್ಯಮಂತ್ರಿಯನ್ನಾಗಿ ಮಾಡು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆದು ದೇವರ ಮೊರೆಹೋಗಿದ್ದಾರೆ.

ರಾಜ್ಯದಲ್ಲಿ ಎದ್ದಿರುವ ಡ್ರಗ್ಸ್ ಬಿರುಗಾಳಿಯ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕೂಡ ಬಹಳ ಸದ್ದು ಮಾಡುತ್ತಿದೆ. ಬಿಜೆಪಿ ಪ್ರಮುಖ ಶಾಸಕರು ಕೂಡ ಸೂಕ್ತ ಸ್ಥಾನಮಾನಕ್ಕಾಗಿ ತೆರೆಮೆರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಡಿಸಿಎಂ ಸ್ಥಾನಕ್ಕಾಗಿ ಗಡೇ ದುರ್ಗಾದೇವಿ ಮೊರೆ ಹೋಗಿರುವ ಸಚಿವ ಬಿ .ಶ್ರೀರಾಮುಲು, ಡಿಸಿಎಂ ಸ್ಥಾನ ನೀಡು ಎಂದು ಇಂಗ್ಲಿಷ್ ನಲ್ಲಿ ಪತ್ರ ಬರೆದಿದ್ದಾರೆ.  ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಶ್ರೀರಾಮುಲು, ದೇವಿಯ ದರ್ಶನಕ್ಕೆಂದೇ ಒಂದು ದಿನ ಮುಂಚೆಯೇ ಜಿಲ್ಲೆಗೆ ಬಂದಿದ್ದಾರೆ.

ನೇರವಾಗಿ ಗೋನಾಲಕ್ಕೆ ತೆರಳಿ ಗಡೇ ದುರ್ಗಾದೇವಿ ದರ್ಶನ ಪಡೆದು ಬಳಿಕ ದೇವಸ್ಥಾನದ ಪೂಜರಿ ಮರಿಸ್ವಾಮಿ ಅವರ ಮಾರ್ಗದರ್ಶನದಂತೆ, ದೇವಿಯ ಗರ್ಭಗುಡಿಯೊಳಗೆ ತೆರಳಿ ತಮ್ಮ ಪತ್ರವನ್ನು ದೇವಿಯ ಪಾದದ ಬಳಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೂ ಮುಂಚೆ ದೇವಸ್ಥಾನದ ಅರ್ಚಕ ಮರಿಸ್ವಾಮಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಅಲ್ಲಿ ಒಂದು ಹಂತದ ಮಾತುಕತೆ ಬಳಿಕ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೋನಾಲ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಅಂದು ಸಹ ಡಿ.ಕೆ.ಶಿವಕುಮಾರ್ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಪತ್ರ ಬರೆದಿದ್ದರು ಎನ್ನಲಾಗಿದೆ. ಪತ್ರದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಲಭಿಸಿತು ಅನ್ನೋದು ಭಕ್ತರ ನಂಬಿಕೆ. ಇದೀಗ ಶ್ರೀರಾಮುಲು ಅವರು ಸಹ ದೇವಿಯ ದರ್ಶನ ಪಡೆದು, ತಮ್ಮನ್ನು ಡಿಸಿಎಂ ಮಾಡುವಂತೆ ಕೇಳಿ ಕೊಂಡಿದ್ದಾರೆ.

Facebook Comments