ಆರೋಗ್ಯ ದೃಢೀಕರಣ ಪತ್ರ ತರಲು ನೌಕರರಗೆ ಒತ್ತಡ ಹೇರುವಂತಿಲ್ಲ : ಸರ್ಕಾರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 9- ಖಾಸಗಿ ಕಚೇರಿಗಳು ತಮ್ಮ ನೌಕರರಿಗೆ ಆರೋಗ್ಯ ದೃಢೀಕರಣ ಪತ್ರ ತರುವಂತೆ ಒತ್ತಡ ಹಾಕಬಾರದೆಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಲಾಕ್‍ಡೌನ್‍ನಿಂದಾಗಿ ಮುಚ್ಚಿದ ಖಾಸಗಿ ಕಂಪನಿಗಳು ಇದೀಗ ನಿಧಾನವಾಗಿ ಆರಂಭವಾಗುತ್ತಿವೆ.

ನೌಕರರು ತಮ್ಮ ಕಚೇರಿಗೆ ಮರಳಗಾಬೇಕಾದರೆ ಕಡ್ಡಾಯವಾಗಿ ಆರೋಗ್ಯ ದೃಢೀಕರಣ ಪತ್ರ ತರಬೇಕೆಂಬ ಒತ್ತಡ ಹಾಕಿವೆ. ಒಂದು ವೇಳೆ ಯಾರು ದೃಢೀಕರಣ ಪತ್ರ ತರುವುದಿಲ್ಲವೋ ಅಂಥವರಿಗೆ ಕಚೇರಿ ಪ್ರವೇಶವಿರುವುದಿಲ್ಲ ಎಂದು ಬೆದರಿಕೆಯನ್ನು ಒಡ್ಡಿವೆ. ಹೀಗಾಗಿ ಅನೇಕ ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೌಕರರು ಚಿಕಿತ್ಸೆಗೊಳಪಡಲು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಂಡುಬಂದಿದ್ದವು.

ಮೊದಲೇ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ಹೆಣಗಾಡುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಏಕಾಏಕಿ ಖಾಸಗಿ ನೌಕರರು ದಾಂಗುಡಿ ಇಟ್ಟ ಪರಿಣಾಮ ಇತರರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಈ ಸಂಬಂಧ ಪ್ರಾಥಮಿಕ ಮತ್ತು ಆರೋಗ್ಯ ಕುಟುಂಬ ಇಲಾಖೆಯ ಆಯುಕ್ತ ಪಂಕಜ್‍ಕುಮಾರ್ ಪಾಂಡೆ ಸೂಚನೆಯೊಂದನ್ನು ಕೊಟ್ಟಿದ್ದಾರೆ. ಕ್ವಾರಂಟೈನ್‍ಗೆ ಒಳಗಾದ ಇಲ್ಲವೇ ಸೋಂಕು ತಗುಲಿದ ಶಂಕಿತ ವ್ಯಕ್ತಿಯನ್ನು ಹೊರತುಪಡಿಸಿ ರಾಜ್ಯದ ಯಾವುದೇ ವ್ಯಕ್ತಿಯೂ ಕೋವಿಡ್ -19 ಚಿಕಿತ್ಸೆಗೆ ಒಳಗಾಗಬಾರದು.

ಸರ್ಕಾರಿ ಇಲ್ಲವೇ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೊಂಕು ಇಲ್ಲದವರಿಗೆ ಯಾವುದೇ ಕಾರಣಕ್ಕೂ ಚಿಕಿತ್ಸೆಗೊಳಪಡಿಸಬಾರದು. ಅಲ್ಲದೆ ಅದಕ್ಕೆ ಸಂಬಂಧಿಸಿದ ದೃಢೀಕರಣ ಪತ್ರವನ್ನು ನೀಡಬಾರದು. ಒಂದು ವೇಳೆ ಯಾರಾದರೂ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಪತ್ರ ನೀಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಈವರೆಗೂ ಸರ್ಕಾರಿ, ಖಾಸಗಿ, ಕಾರ್ಮಿಕ ವರ್ಗ ಹಾಗೂ ಸಾರ್ವಜನಿಕರಿಗೂ ಸೇರಿದಂತೆ ವೈರಸ್ ಸೋಂಕು ತಗುಲದೇ ಇರುವವರನ್ನೂ ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದು ಎಲ್ಲಿಯೂ ಸೂಚನೆ ಕೊಟ್ಟಿಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಲಾಕ್‍ಡೌನ್ ತುಸು ಸಡಿಲಗೊಳಿಸಿದೆ. ಖಾಸಗಿ ಕಂಪನಿಗಳಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ಕೆಲಸಕಾರ್ಯಗಳನ್ನು ಆರಂಭಿಸಲು ಸೂಚಿಸಲಾಗಿತ್ತು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ನಿರ್ಧಿಷ್ಟ ಪ್ರಮಾಣದ ಸಿಬ್ಬಂದಿ ಇಟ್ಟುಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡುವಂತೆ ಸೂಚನೆ ಕೊಡಲಾಗಿತ್ತು.

ಇದೀಗ ನೌಕರರಿಗೆ ಆಡಳಿತ ಮಂಡಳಿಯವರು ಆರೋಗ್ಯ ತಪಾಸಣೆಗೊಳಗಾದ ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಮೊದಲೇ ಕೆಲಸವೂ ಇಲ್ಲದೆ ಸಂಬಳವೂ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ನೌಕರರಿಗೆ ಆಡಳಿತ ಮಂಡಳಿಯ ಈ ಸೂಚನೆ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ.

Facebook Comments

Sri Raghav

Admin