Friday, March 29, 2024
Homeರಾಜ್ಯಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಯಷ್ಟೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು : ಸಿಎಂ

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಯಷ್ಟೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು : ಸಿಎಂ

ಬೆಂಗಳೂರು, ನ.30- ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಎಂಆರ್‍ಐ ಸೌಲಭ್ಯಗಳು ದೊರೆಯಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಯಷ್ಟೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂಬ ಭಾವನೆ ಮೂಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಹೇಳಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ 108 ಆರೋಗ್ಯ ಕವಚ ಯೋಜನೆಯಡಿ ತುರ್ತು ಸೇವೆಗೆ 262 ಆ್ಯಂಬುಲೆನ್ಸ್‍ಗಳನ್ನು ಆರೋಗ್ಯ ಇಲಾಖೆಗೆ ಸೇರ್ಪಡೆ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜನರ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ. ಗ್ರಾಮೀಣ, ನಗರ, ಜಾತಿ, ಧರ್ಮ ಬೇಧವಿಲ್ಲದೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿದೆ. ನಾವು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ನೀಡಿದರೆ ಮಾನವ ಸಂಪನ್ಮೂಲ ಹೆಚ್ಚಾಗಲು ಸಾಧ್ಯ. ಮಾನವ ಸಂಪನ್ಮೂಲ ಹೆಚ್ಚಾದರೆ ಉತ್ಪಾದನೆ ಹೆಚ್ಚಾಗುತ್ತದೆ, ಜಿಡಿಪಿ ವೃದ್ಧಿಯಾಗುತ್ತದೆ ಎಂದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಸೇವೆ ಆರಂಭಿಸಿದರು. ಯೋಜನೆಯಡಿ ಕೇಂದ್ರ ಸರ್ಕಾರ ಶೇ.60ರಷ್ಟು, ರಾಜ್ಯ ಸರ್ಕಾರ ಶೇ.40ರಷ್ಟು ಹಣ ಖರ್ಚು ಮಾಡುತ್ತಿವೆ. ಒಟ್ಟಾರೆ ಯೋಜನೆಯ ಉದ್ದೇಶ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವುದಾಗಿದೆ. ಅಪಘಾತ, ಹೆರಿಗೆ, ಹೃದಯಾಘಾತ ಸೇರಿದಂತೆ ಇತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಸಿಗದೆ ಯಾರು ಸಾವನ್ನಪ್ಪಬಾರದು ಎಂದು 2008ರಲ್ಲಿ ತುರ್ತು ಆ್ಯಂಬುಲೇನ್ಸ್‍ಗಳನ್ನು ಆರೋಗ್ಯ ಸೇವೆಗೆ ಸಮರ್ಪಿಸಲಾಗಿದೆ.

ಯುವಜನರ ಸಬಲೀಕರಣಕ್ಕೆ ಎನ್‍ಇಪಿ ಪೂರಕ : ನಾರಾಯಣ ಮೂರ್ತಿ

ರಾಜ್ಯದಲ್ಲಿ 236 ತಾಲ್ಲೂಕುಗಳಿದ್ದು, ಏಳು ಕೋಟಿ ಜನಸಂಖ್ಯೆ ಇದೆ. ತುರ್ತು ಸೇವೆಗೆ 840 ಆ್ಯಂಬುಲೇನ್ಸ್‍ಗಳ ಅಗತ್ಯ ಇದೆ. ಪ್ರಸ್ತುತ 740 ಆ್ಯಂಬುಲೆನ್ಸ್‍ಗಳಿವೆ. ಈಗ ಪ್ರತಿ ತಾಲ್ಲೂಕಿಗೆ ನಾಲ್ಕು ಆ್ಯಂಬುಲೆನ್ಸ್‍ಗಳಿವೆ ಎನ್ನಲಾಗಿದೆ. ರಸ್ತೆ ಅಪಘಾತದಲ್ಲಿ ಒಂದು ಗಂಟೆಯಲ್ಲಿ ಗೋಲ್ಡನ್ ಅವರ್‍ನಲ್ಲಿ ಚಿಕಿತ್ಸೆ ದೊರೆತರೆ ಜೀವ ಉಳಿಸಲು ಸಾಧ್ಯ. ಪ್ರಾಥಮಿಕ ಚಿಕಿತ್ಸೆ ಬಳಿಕ ರೋಗಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ವೈದ್ಯರು ನಿರ್ಧರಿಸುತ್ತಾರೆ. ಹೊಸ ಆ್ಯಂಬುಲೆನ್ಸ್‍ನಲ್ಲಿ ನುರಿತ ಶೂಶ್ರೂಶಕರು, ತರಬೇತಿ ಪಡೆದ ತಂತ್ರಜ್ಞರು ಇರಲಿದ್ದಾರೆ. ಆತ್ಯಾಧುನಿಕ ಜೀವ ರಕ್ಷಕ ಸಲಕರಣೆಗಳನ್ನು ಅಳವಡಿಸಲಾಗಿದೆ. ಅಗತ್ಯದಷ್ಟು ಆ್ಯಂಬುಲೆನ್ಸ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ಆರ್ಥಿಕ ನೆರವು ನೀಡಲಾಗುವುದು ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಎಂಆರ್‍ಐ ಸೌಲಭ್ಯ ಇರಬೇಕು, ಕೆಲ ಜಿಲ್ಲೆಗಳಲ್ಲಿ ಇವೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ಇಲ್ಲ. ಇತ್ತೀಚೆಗೆ ತಾವು ಪ್ರಗತಿ ಪರಿಶೀಲನೆ ನಡೆಸಿದಾಗ ಎಲ್ಲಾ ಜಿಲ್ಲೆಗಳಲ್ಲೂ ಎಂಆರ್‍ಐ ಸೇವೆ ದೊರಕುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ, ಈ ಪ್ರಕ್ರಿಯೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಹಳೆಯ, ಕೊಳೆಯಾದ ಬಟ್ಟೆ ಹಾಕಿಕೊಂಡು ಹಾಕಿಕೊಂಡು ಬರುವ ಬಡವರನ್ನು ಮಾನವೀಯ ದೃಷ್ಟಿಯಲ್ಲಿ ನೋಡಿ ತಾರತಮ್ಯ ಇಲ್ಲದಂತೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂದು ಕರೆ ನೀಡಿದರು.

ಖಾಸಗಿ ಆಸ್ಪತ್ರೆಗಳಿಗೆ ಅಥವಾ ಪ್ರಾಯೋಗಲಯಗಳಿಗೆ ಹೋದರೆ ದುಬಾರಿ ಖರ್ಚಾಗಲಿದೆ. ನಾನು ಮುಖ್ಯಮಂತ್ರಿಯಾದ ಬಳಿಕ 25 ಕೋಟಿ ರೂಪಾಯಿಗಳನ್ನು ಆರೋಗ್ಯ ಚಿಕಿತ್ಸೆಗಾಗಿಯೇ ಪರಿಹಾರ ನಿಯಿಂದ ನೆರವು ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 20-30 ಲಕ್ಷ ರೂಪಾಯಿ ಖರ್ಚಾಗಿರುವ ಬಿಲ್‍ಗಳನ್ನು ಸಾರ್ವಜನಿಕರು ಸಲ್ಲಿಸುತ್ತಿದ್ದಾರೆ. ನಾನು ಗರಿಷ್ಠ ಐದು ಲಕ್ಷದವರೆಗೂ, ಅಂದರೆ ಸುಮಾರು ನಾಲ್ಕನೇ ಒಂದು ಭಾಗದಷ್ಟು ವೆಚ್ಚದ ನೆರವನ್ನು ನೀಡುತ್ತೇನೆ ಎಂದರು.

ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ ಎಂಬ ಭಾವನೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಸೇವೆ ಸಿಗಲಿದೆ ಎಂಬ ಭಾವನೆ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಯದೇವ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುವುದಾದರೆ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಇದಕ್ಕೆ ಪೂರಕವಾಗಿ ಸಿಬ್ಬಂದಿಗಳ ಕೊರತೆಯನ್ನು ನಿಗಿಸಲು ಸರ್ಕಾರ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ.

ಸೂರತ್ ರಾಸಾಯನಿಕ ಘಟಕದಲ್ಲಿ ಅಗ್ನಿ ಅವಘಡ, 7 ಕಾರ್ಮಿಕರ ಶವ ಪತ್ತೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗಿಂತಲೂ ವೈದ್ಯರ ಸಂಖ್ಯೆ ಹೆಚ್ಚಿದೆ. ಪದವಿ ಪಡೆದು ಹೊರ ಬಂದ ವೈದ್ಯರಿಗೆ ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯ ಎಂದು ನಿಯಮ ಇತ್ತು. ಇದರಿಂದಾಗಿ ಹುದ್ದೆಗಳಿಗಿಂತಲೂ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ನೇರವಾಗಿ ಖಾಲಿ ಹುದ್ದೆಗಳಿಗೆ ವೈದ್ಯರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ ಎಂದರು.

ಆರೋಗ್ಯ ಇಲಾಖೆ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದತ್ತ ಹೆಚ್ಚಿನ ಗಮನ ಹರಿಸಬೇಕು. ಹಿಂದುಳಿದ ಭಾಗಗಳ ಬಗ್ಗೆ ಭಾಷಣ ಹೊಡೆದರೆ ಆಗುವುದಿಲ್ಲ, ಅಗತ್ಯ ಸೌಲಭ್ಯ ದೊರಕಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.

RELATED ARTICLES

Latest News