ಭಾರೀ ಮಳೆಗೆ ಮನೆ ಮೇಲ್ಛಾವಣಿ ಕುಸಿದು ಮೂವರ ದುರ್ಮರಣ, ತಲಾ 5 ಲಕ್ಷ ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.6- ಕಳೆದ ಎರಡು ದಿನಗಳಿಂದ ಬಾಗಲಕೋಟೆ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ದಂಪತಿ ಮತ್ತು ಮಗ ಮೃತಪಟ್ಟಿರುವ ಧಾರುಣ ಘಟನೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ನಡೆದಿದೆ. ಈರಪ್ಪ ಹಡಪದ(60), ಗೌರವ್ವ ಹಡಪದ (52) ಮತ್ತು ಪುತ್ರ ನಿಂಗಪ್ಪ ಹಡಪದ(35) ಮೃತ ದುರ್ದೈವಿಗಳು.

ಘಟನೆಯಲ್ಲಿ ನಿಂಗಪ್ಪನ ಪತ್ನಿ ಸವಿತಾ ಹಾಗೂ ಮಗಳು ತನು ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ತಡರಾತ್ರಿ 2 ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಕುಸಿದು ಈ ದುರ್ಘಟನೆ ಸಂಭವಿಸಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಬಾಗಲಕೋಟೆ ಗ್ರಾಮೀಣ ಪೊಲೀಸರು ಸ್ಥಳೀಯರ ಸಹಾಯದಿಂದ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಇತ್ತ ದಾವಣೆಯಲ್ಲೂ ಕೂಡ ಭಾರೀ ಮಳೆಯ ಪರಿಣಾಮ ರಸ್ತೆಗಳಲೆಲ್ಲಾ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಸತತವಾಗಿ ಮಳೆ ಸುರಿದ ಪರಿಣಾಮ ತರಕಾರಿ ಮಾರುಕಟ್ಟೆ ಜಲಾವೃತಗೊಂಡು, ರೈತರು, ವರ್ತಕರ ವಹಿವಾಟಿಗೆ ಅಡಚಣೆಯುಂಟಾಯಿತು.

ಚಿಕ್ಕಮಗಳೂರಿನ ಹಲವೆಡೆ ಕೂಡ ಕಳೆದ ಎರಡು ದಿನಗಳಂದ ಭಾರೀ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಮೂಡಿಗೆರೆ ತಾಲೂಕಿನ ಹೊಕ್ಕಳ್ಳಿಕೊಪ್ಪದಲ್ಲಿ ಸೇತುವೆ ಕೊಚ್ಚಿ ಹೋಗಿದೆ. ಕಳೆದ 2 ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಿದ್ದ ಈ ಸೇತುವೆ ಕೊಚ್ಚಿ ಹೋದ ಪರಿಣಾಮ ಹೊರನಾಡು-ಹೊಕ್ಕಳ್ಳಿ-ಕೊಪ್ಪಕ್ಕೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಸೇತುವೆ ಭಾಗದಲ್ಲಿ ಚಲಿಸುತ್ತಿದ್ದ ಬೈಕ್ ಸವಾರ ಕೂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

#ಮೃತ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ.ನಂತೆ 15 ಲಕ್ಷ ರೂ. ಪರಿಹಾರವನ್ನು ಶಾಸಕ ಚರಂತಿಮಠ ಘೋಷಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಅವರು, ಕುಟುಂಬದವರಿಗೆ ಸಾಂತ್ವನ ಹೇಳಿ ಅಂತ್ಯ ಸಂಸ್ಕಾರಕ್ಕೆ 15 ಸಾವಿರ ರೂ. ನೆರವು ನೀಡಿದ್ದಾರೆ.

ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮತ್ತು ಪ್ರವಾಹದಿಂದ ಈಗಾಗಲೇ ನೊಂದ ಜನರಿಗೆ ಈ ಘಟನೆ ಮತ್ತಷ್ಟು ನೋವನ್ನು ಉಂಟುಮಾಡಿದೆ. ಮೃತ ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Facebook Comments