ವಾಯಭಾರ ಕುಸಿತದ ಎಫೆಕ್ಟ್: ಈ ಭಾರಿ ಹಿಂಗಾರು ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17-ವಾಯಭಾರ ಕುಸಿತದಿಂದ ಉತ್ತರ ಕರ್ನಾಟಕದ ಬಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಭೀಮಾ ತೀರದಲ್ಲಿ ಪ್ರವಾಹ ಮುಂದುವರೆದಿದೆ. ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ ಕೆಲವೆಡೆ ಭಾರೀ ಮಳೆಯಾಗಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.

ಸದ್ಯಕ್ಕೆ ಮಳೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ ಭೀಮಾ ನದಿ ಕೊಳ್ಳದಲ್ಲಿ ಭಾರೀ ಪ್ರಮಾಣದ ಪ್ರವಾಹ ಮುಂದುವರೆದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು. ಬೀಮಾನದಿಯ ಉಪ ನದಿಗಳಲ್ಲೂ ಪ್ರವಾಹವಿದೆ. ನಿನ್ನೆಯವರೆಗೂ ಭೀಮಾ ನದಿಯಲ್ಲಿ ಐದು ಲಕ್ಷ ಕ್ಯುಸೆಕ್ಸ್ ನಷ್ಟಿದ್ದ ಪ್ರವಾಹ ಪರಿಸ್ಥಿತಿ ಇಂದು ಮತ್ತೆ ಏಳು ಲಕ್ಷಕ್ಕೇ ಏರಿಕೆಯಾಗಿದೆ ಎಂಬ ಮಾಹಿತಿ ಇದೆ.

ಇದು ಆತಂಕಕ್ಕೆ ಕಾರಣವಾಗಿದ್ದು, ಇದರಿಂದ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳು ಉಂಟಾಗಲಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಭಾರೀ ಮಳೆ ಮತ್ತು ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ಹಾನಿ ಹಾಗೂ ಆಸ್ತಿ-ಪಾಸ್ತಿಗೂ ಹಾನಿ ಸಂಭವಿಸಿದೆ. ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದ್ದರೂ ಅ.19 ರ ನಂತರ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಆಗೊಂದು ವೇಳೆ ವಾಯುಭಾರ ಕುಸಿತವಾದರೂ ರಾಜ್ಯದ ಮೇಲೆ ಹೆಚ್ಚಿ ನ ಪರಿಣಾಮ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂಗಾರು ವಿಳಂಬ: ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿಗಳು ಸೇರಿದಂತೆ ವಾತವಾರಣದಲ್ಲಿ ಉಂಟಾಗಿದ್ದ ಬದಲಾವಣೆಯಿಂದಾಗಿ ನೈರುತ್ಯ ಮುಂಗಾರು ಮಾರುತಗಳು ಮರಳುವಿಕೆ ವಿಳಂಬವಾಗಿದೆ. ಹೀಗಾಗಿ ಈಶಾನ್ಯ ಹಿಂಗಾರು ಮಳೆ ಆರಂಭವೂ ಎಂಟು ದಿನ ವಿಳಂಬವಾಗಲಿದೆ.

ಅ.25ರ ನಂತರವೇ ಹಿಂಗಾರು ಆರಂಭವಾಗುವ ಸಾಧ್ಯತೆಗಳಿವೆ. ಈಗಾಗಲೇ ಮುಂಗಾರು ಮರಳುವಿಕೆ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಆದರೆ, ವಾತಾವರಣಲ್ಲಿ ಉಂಟಾದ ಬದಲಾವಣೆಯಿಂದ ಮುಂಗಾರು ಮರಳುವಿಕೆ ತಡವಾಗಿ ಆರಂಭವಾಗುತ್ತಿದೆ ಎಂದು ಅವರು ಹೇಳಿದರು.

Facebook Comments