ತಂಪೆರೆಯುವ ಜೊತೆಗೆ ಜೊತೆಗೆ ಅನಾಹುತಗಳನ್ನು ಸೃಷಿಸಿದ ಮಳೆರಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 1- ಬಿಸಿಲಿನಿಂದ ಬಸವಳಿದಿದ್ದ ರಾಜ್ಯದ ಜನತೆಗೆ ವರುಣನ ಆಗಮನದಿಂದ ಕೊಂಚ ತಂಪೆರದಂತಾದರೆ ಮತ್ತೊಂದೆಡೆ ಅಲ್ಲಲ್ಲಿ ರೈತರ ಬೆಳೆಗಳು ನೆಲ ಕಚ್ಚಿದ್ದು, ಕೆಲವೆಡೆ ಮನೆಗಳಿಗೆ ಹಾನಿ ಉಂಟಾಗಿದ್ದು, ಮೇಲ್ಚಾವಣಿ ಹಾರಿ ಹೋಗಿರುವ ಘಟನೆಗಳು ವರದಿಯಾಗಿವೆ.

ಅಲ್ಲದೆ, ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿ ಜನಸಾಮಾನ್ಯರು ರಾತ್ರಿಯಿಡೀ ಕತ್ತಲಲ್ಲಿರುವಂತಾಯಿತು.

# ಮೈಸೂರು: ಸಂಜೆ ಗಾಳಿ ಹೆಚ್ಚಾದ ಹಿನ್ನೆಲೆಯಲ್ಲಿ ಸಾಧಾರಣ ಮಳೆಯಾಗಿದೆ. ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿತ್ತು. ಇನ್ನೂ ಕೆಲ ರಸ್ತೆಗಳಲ್ಲಿ ಕೆರೆಯಂತೆ ನೀರು ನಿಂತಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.

ರಸ್ತೆ ಬದಿ ವ್ಯಾಪಾರಿಗಳು ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಯಿತು. ನ್ಯೂ ಕಾಂತರಾಜ ಅರಸು ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಗಾಳಿ ಸಹಿತ ಮಳೆ ಆರಂಭವಾಗುತ್ತಿದ್ದಂತೆ ನಗರದ ಕೆಲ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು.

# ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ದುಗ್ಗೇನಹಳ್ಳಿಯ ಸಿದ್ದಪ್ಪ ಎಂಬುವವರ ಮನೆಯ ಶೀಟ್ ಹಾರಿಹೋಗಿದೆ. ಭಾರೀ ಗಾಳಿ ಸಹಿತ ಬಿದ್ದ ಮಳೆಗೆ ಮನೆಯ ಹೆಂಚುಗಳು, ಶೀಟುಗಳು ಹಾನಿಗೊಳಗಾಗಿವೆ.

ತಿಪಟೂರು ತಾಲೂಕಿನ ಕೋಳಿಫಾರಂ ಒಂದರ ಮೇಲೆ ಮರ ಬಿದ್ದಿದ್ದರಿಂದ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ತಡರಾತ್ರಿ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಆಲ್ಬೂರು ಅಣಪನಹಳ್ಳಿ ಗ್ರಾಮದಲ್ಲಿ ಕೋಳಿ ಫಾರಂ ಮೇಲೆ ಬೃಹತ್ ಗಾತ್ರದ ಹಲಸಿನಮರ ಬಿದ್ದ ಪರಿಣಾಮ ಕೋಳಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಗ್ರಾಮದ ಮಲ್ಲೇಶ್ ಎಂಬುವವರಿಗೆ ಈ ಕೋಳಿಫಾರಂ ಸೇರಿದ್ದು, 2 ಸಾವಿರಕ್ಕೂ ಅಧಿಕ ಕೋಳಿಮರಿಗಳು ಸಾವನ್ನಪ್ಪಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸುದ್ದಿ ತಿಳಿದ ಕಂದಾಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಕುಮಾರ ಸ್ವಾಮಿ ಸರ್ಕಲ್ ಬಳಿ ವಕೀಲ ಚಂದ್ರಶೇಖರ್ ಅವರ ಮನೆಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಪುಸ್ತಕಗಳು, ನ್ಯಾಯಾಲಯದ ಫೈಲ್‍ಗಳು ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿವೆ.

ತಕ್ಷಣ ಮಹಾನಗರ ಪಾಲಿಕೆ ಆಯುಕ್ತ ಭೂಪಾಲಂ ಅವರ ಗಮನಕ್ಕೆ ತಂದಿದ್ದು, ಅವರು ತಕ್ಷಣ ಸ್ಪಂದಿಸಿ ಮನೆಯಲ್ಲಿ ತುಂಬಿದ್ದ ನೀರನ್ನು ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಇದೇ ವ್ಯಾಪ್ತಿಯಲ್ಲಿ ಹಲವಾರು ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

# ಜಿಲ್ಲಾಧಿಕಾರಿ ಭೇಟಿ: ಇಂದು ಬೆಳಗ್ಗೆ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಅವರು ಜಿಲ್ಲೆಯಲ್ಲಿ ಸುರಿದಿರುವ ಮಳೆಯಿಂದ ಎಲ್ಲೆಲ್ಲಿ ಏನೇನು ನಷ್ಟ ಸಂಭವಿಸಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲೆಯ ಎಲ್ಲ ತಾಲೂಕಿನ ತಹಸೀಲ್ದಾರರಿಗೆ ಸೂಚಿಸಿದ್ದಾರೆ.ಅಲ್ಲದೆ ಉಪವಿಭಾಗಾಧಿಕಾರಿಗಳು ತಕ್ಷಣವೇ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸಹ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

# ಕುಣಿಗಲ್: ರಾತ್ರಿ ಸುರಿದ ಗುಡುಗು, ಸಿಡಿಲು ಸಹಿತ ಮಳೆಗೆ ಅಡಿಕೆ ಮರ, ತೆಂಗಿನ ಮರಗಳು 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮನೆಯ ಹೆಂಚುಗಳು ಹಾರಿ ಹೋಗಿವೆ. ಸುಮಾರು ಆರು ತಿಂಗಳಿನಿಂದಲೂ ಮಳೆ ಕಾಣದೆ ರೈತರು ಕಂಗಾಲಾಗಿದ್ದರು, ಬೆಳೆ ಬೆಳೆಯಲು ಮಳೆಗಾಗಿ ಕಾದು ಕುಳಿತಿದ್ದರು. ನಿನ್ನೆ ರಾತ್ರಿ ತಾಲೂಕಿನಾದ್ಯಂತ ಭಾರೀ ಗುಡುಗು, ಸಿಡಿಲು ಸಹಿತ ಸುರಿದ ಮಳೆಯೂ ರೈತರಿಗೆ ಹರ್ಷ ತಂದಿದೆ.

ತಾಲೂಕಿನಲ್ಲಿ ಭಾರೀ ಬಿರುಗಾಳಿಗೆ ಫಸಲಿಗೆ ಬಂದಿದ್ದ ಅಡಿಕೆ ಮರ, ತೆಂಗಿನ ಮರಗಳು, ಬಾಳೆ ಗಿಡಗಳು ಧರೆಗುರುಳಿದ್ದು, ಅಪಾರ ನಷ್ಟ ಉಂಟಾಗಿದೆ. ಪಟ್ಟಣದ ಬಿದನಗೇರೆ, ಕೊತ್ತಿಗೆರೆ ಇತರೆ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಹಾರಿ ಹೋಗಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ರಾತ್ರಿ ಪೂರ ವಿದ್ಯುತ್ ವ್ಯತ್ಯಯವಾಗಿದ್ದರಿಂದ ಜನಸಾಮಾನ್ಯರು ಕತ್ತಲಲ್ಲಿರುವಂತಾಯಿತು. ಮತ್ತೊಂದೆಡೆ ಬೆಳೆ ಹಾನಿಯಿಂದ ಕೆಲ ರೈತರು ಕಂಗಾಲಾಗಿದ್ದು, ಪರಿಹಾರ ನೀಡಲು ಅಧಿಕಾರಿಗಳು ಸ್ಪಂದಿಸಬೇಕಾಗಿದೆ.

# ಪಾವಗಡ: ಬಿರುಗಾಳಿ ಮಳೆಗೆ ಎರಡು ಹಸುಗಳು ಸಾವನ್ನಪ್ಪಿವೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪೆಡ್ಲಿಜೀವಿ ಗ್ರಾಮದ ನರಸಿಂಹಪ್ಪ ಎಂಬುವವರಿಗೆ ಸೇರಿದ ಹಸುಗಳು ಸಾವನ್ನಪ್ಪಿದ್ದು, ಜೀವನಾಧಾರಕ್ಕಿದ್ದ ಎರಡು ಹಸುಗಳನ್ನು ಕಳೆದುಕೊಂಡು ಈ ಕುಟುಂಬ ಕಂಗಾಲಾಗಿದೆ.

ಪಾವಗಡದ ವೈ.ಎನ್.ಹೊಸಕೋಟೆಯ ಇಂದ್ರಬೆಟ್ಟ ಗ್ರಾಮದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಸಾಮಾನುಗಳು ಪುಡಿಪುಡಿಯಾಗಿವೆ. ಕುಮಾರ್ ಎಂಬುವವರ ಮನೆಗೆ ಸಂಜೆ ಸಿಡಿಲು ಬಡಿದಿದ್ದು, ಮನೆಯಲ್ಲಿ ಯಾರೂ ಇರದಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಡಿಲಿನ ರಭಸಕ್ಕೆ ಪಕ್ಕದ ಮನೆಯಲ್ಲಿದ್ದ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

# ಹಿರಿಯೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಾಟಕನಹಳ್ಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದು, ಈ ಸಿಡಿಲಿನ ಕಿಡಿ ಸಮೀಪದ ಬಸವಣ್ಣ ವಿಗ್ರಹಕ್ಕೆ ತಗುಲಿದ ಪರಿಣಾಮ ವಿಗ್ರಹ ಒಡೆದು ಹೋಳಾಗಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಒಟ್ಟಾರೆ ಒಂದೆಡೆ ಬಿಸಿಲಿನಿಂದ ತಂಪಾದರೆ, ಇನ್ನೊಂದೆಡೆ ಮಳೆಯಿಂದಾಗಿ ಹಾನಿಯಾಗಿರುವುದು ಬೇಸರ ಉಂಟುಮಾಡಿದೆ.

Facebook Comments

Sri Raghav

Admin