ಭಾರಿ ಮಳೆ, ಪ್ರವಾಹಕ್ಕೆ ತತ್ತರಿಸಿದ ಉತ್ತರ ಭಾರತ, 38 ಸಾವು, ಅನೇಕರು ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

ಶಿಮ್ಲಾ/ನವದೆಹಲಿ/ಚಂಡೀಗಢ, ಆ.19- ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತ ರಾಜ್ಯಗಳಲ್ಲಿ ಭಾರೀ ಜಲಗಂಡಾಂತರ ಸೃಷ್ಟಿಸಿ ಸಾವು-ನೋವು, ಆಸ್ತಿ-ಪಾಸ್ತಿಗೆ ಕಾರಣವಾಗಿದ್ದ ಭಾರೀ ಮಳೆ ಮತ್ತು ಭೀಕರ ಪ್ರವಾಹದ ರೌದ್ರಾವತಾರ ಈಗ ಉತ್ತರ ಭಾರತವನ್ನು ನಲುಗುವಂತೆ ಮಾಡಿದೆ.

ಹಿಮಾಚಲ ಪ್ರದೇಶ , ಪಂಜಾಬ್, ಹರಿಯಾಣ, ಉತ್ತರಾಖಂಡ್, ನವದೆಹಲಿ ಮತ್ತು ಉತ್ತರಪ್ರದೇಶ ಈ ಆರು ರಾಜ್ಯಗಳಲ್ಲಿ ನೆರೆ ಹಾವಳಿಯಿಂದ ಒಟ್ಟು 38 ಮಂದಿ ಮೃತಪಟ್ಟಿದ್ದು , ಅನೇಕರು ಕಣ್ಮರೆಯಾಗಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕನಿಷ್ಠ 24 ಮಂದಿ ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.

ಪ್ರವಾಹದಿಂದಾಗಿ ಅನೇಕ ಮನೆಗಳು ಕುಸಿದಿದ್ದು , ಕೆಲವರು ಕಣ್ಮರೆಯಾಗಿದ್ದಾರೆ. ಕುಲು, ಮನಾಲಿ, ಚಂಬಾ ಸೇರಿದಂತೆ ಅನೇಕ ಜಿಲ್ಲೆಗಳು ಜಲ ಸಂಕಷ್ಟದಿಂದ ತತ್ತರಿಸಿವೆ.ಮಳೆ ಸಂಬಂಧ ನಡೆದ ವಿವಿಧ ದುರಂತಗಳಲ್ಲಿ ಇಬ್ಬರು ನೇಪಾಳಿಗರು ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶಿಮ್ಲಾವೊಂದರಲ್ಲೇ 10 ಮಂದಿ ಸಾವಿಗೀಡಾಗಿದ್ದು, ಸೋಲಾನ್ ವ್ಯಾಲಿಯಲ್ಲಿ 5, ಕುಲ್ಲು, ಚಂಬಾ ಮತ್ತು ಸಿಮರ್‍ನಲ್ಲಿ ತಲಾ ಇಬ್ಬರು, ಉನಾ, ಲಹೌಲ್ ಸ್ಪಿಟಿ ಜಿಟ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಇನ್ನು ಶಿಮ್ಲಾದ ಆರ್‍ಟಿಒ ಕಚೇರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಾಖಂಡದಲ್ಲಿ ನಿನ್ನೆ ಸಂಭವಿಸಿದ್ದ ಮೇಘ ಸ್ಫೋಟದ ಪರಿಣಾಮ ಸುರಿದ ಭಾರೀ ಮಳೆ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ದೆಹಲಿ, ಹರ್ಯಾಣ, ಪಂಜಬ್‍ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಮೇಘ ಸ್ಫೋಟ ಪರಿಣಾಮ ಯಮುನಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇಲ್ಲಿನ ಅಣೆಕಟ್ಟುಗಳಿಂದ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿರುವುದರಿಂದ ಹರ್ಯಾಣ, ಪಂಜಾಬ್ , ಹರಿಯಾಣ, ಉತ್ತರಪ್ರದೇಶ ಮತ್ತು ದೆಹಲಿಯಲ್ಲೂ ಪ್ರವಾಹ ಭೀತಿ ಆವರಿಸಿದೆ.ಪಂಜಾಬ್‍ನ ಅವೋಲ್ ಗ್ರಾಮದಲ್ಲಿ ನಿನ್ನೆ ಮನೆಯೊಂದು ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಕೆಲವರು ಗಾಯಗೊಂಡಿದ್ದಾರೆ.

ಗಂಗಾ, ಯಮುನಾ ಮತ್ತು ಗಾಗ್ರಾ ನದಿಗಳು ಅಪಾಯ ಮಟ್ಟ ಮೀರಿ ಭೋರ್ಗರೆಯುತ್ತಿದ್ದು , ನದಿ ಪಾತ್ರ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಯಮುನಾ ನದಿ 203.37 ಅಡಿ ಎತ್ತರದಲ್ಲಿ ಹರಿಯುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ನದಿ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಥಿನಿ ಕುಂಡ್ ಬ್ಯಾರೇಜ್‍ನಿಂದ ನದಿಗೆ ಭಾನುವಾರ 8.14 ಕ್ಯೂಸೆಕ್ಸ್ ನೀರನ್ನು ಬಿಡಲಾಗಿದ್ದು, ಇದೂ ಕೂಡ ಪ್ರವಾಹದ ಭೀಕರತೆ ಹೆಚ್ಚಲು ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಡೆಹ್ರಾಡೂನ್ ವರದಿ: ಉತ್ತರಾಖಂಡದಲ್ಲಿ ಸಂಭವಿಸಿರುವ ಮೇಘ ಸ್ಫೋಟದ ಪರಿಣಾಮ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಉತ್ತರ ಕಾಶಿಗೆ ತುರ್ತಾಗಿ 2 ಸೇನಾ ಹೆಲಿಕಾಪ್ಟರ್‍ಗಳನ್ನು ರವಾನೆ ಮಾಡಲಾಗಿದ್ದು, ಮೂರು ವೈದ್ಯಕೀಯ ತಂಡಗಳನ್ನು ರವಾನೆ ಮಾಡಲಾಗಿದೆ. ಅಲ್ಲದೆ ಉತ್ತರಾಖಂಡಕ್ಕೆ ಐಟಿಬಿಪಿ, ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ತಂಡಗಳನ್ನು ರಕ್ಷಣೆಗೆ ರವಾನಿಸಲಾಗಿದ್ದು, ಇವರೊಂದಿಗೆ ರಕ್ಷಣಾ ಕಾರ್ಯಾಚರಣೆ ಹಗ್ಗಗಳು, ಸ್ಯಾಟೆಲೈಟ್ ಸಂವಹನ ಪರಿಕರಗಳನ್ನು ಮೊರಿಯ ಅರಕೋಟ್‍ಗೆ ರವಾನೆ ಮಾಡಲಾಗಿದೆ.

ಇನ್ನು ನಿನ್ನೆ ಉತ್ತರಾಖಂಡದಲ್ಲಿ ಭಾರಿ ಮೇಘ ಸ್ಫೋಟ ಸಂಭವಿಸಿ ಭಾರಿ ಪ್ರಮಾಣದ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು, ಘಟನೆಯಲ್ಲಿ ಕನಿಷ್ಛ 6 ಮಂದಿ ಸಾವನ್ನಪ್ಪಿದ್ದರು. ಉತ್ತರ ಖಂಡದ ಉತ್ತರ ಕಾಶಿಯ ಮೋರಿ ತೆಹ್ಸಿಲ್ ನಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಪರಿಣಾಮ ಭಾರಿ ಮಳೆ ಮತ್ತು ಭೀಕರ ಪ್ರವಾಹ ಏರ್ಪಟ್ಟಿದೆ.

ಉತ್ತರಾಖಂಡದ ಚಮೋಲಿ ಜಿಲ್ಲಾಯಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಮನೆಯೊಂದು ಪ್ರವಾಹಕ್ಕೆ ಸಿಲುಕಿ ಉರುಳಿದ್ದು, ಅದರಲ್ಲಿದ್ದ ತಾಯಿ ಮತ್ತು ಮಗು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ. 35 ವರ್ಷದ ರೂಪಾದೇವಿ ಮತ್ತು 9 ತಿಂಗಳ ಮಗು ಸಾವನ್ನಪ್ಪಿದೆ. ಮನೆ ಕೊಚ್ಚಿ ಹೋದ ಸಂದರ್ಭದಲ್ಲಿ ತಾಯಿ ಮತ್ತು ಮಗು ಒಳಗೆ ನಿದ್ರಿಸುತ್ತಿದ್ದರು.

ತಾಯಿ ಮಗು ಸೇರಿದಂತೆ ಮೇಘ ಸ್ಫೋಟಕ್ಕೆ ಚಮೋಲಿಯ ಘಾಟ್ ಪ್ರದೇಶದಲ್ಲೇ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಮೇಘ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಉತ್ತರಾಖಂಡಕ್ಕೆ ಐಟಿಬಿಪಿ, ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ತಂಡಗಳನ್ನು ರಕ್ಷಣೆಗೆ ರವಾನಿಸಲಾಗಿದೆ. ಇನ್ನು ಈಗಾಗಲೇ ಸ್ಥಳೀಯ ರಕ್ಷಣಾ ತಂಡ ಕೂಡ ಸ್ಥಳಕ್ಕೆ ಧಾವಿಸಿದೆ.

Facebook Comments