ಇನ್ನೂ 2 ದಿನ ಮುಂದುವರೆಯಲಿದೆ ವರುಣನ ಆರ್ಭಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.20-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಮುಂದುವರೆಯಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.

ಕಳೆದ ಮೂರ್ನಾಲ್ಕು ದಿನಗಳಿಂದಲೂ ರಾಜ್ಯದ ಒಳನಾಡಿನಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತಿದೆ. ಅತಿವೃಷ್ಟಿ ಹಾಗೂ ಪ್ರವಾಹ ಉಂಟಾಗಿದ್ದ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಇಳಿಕೆಯಾಗಿದ್ದು, ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ನಾಳೆ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಹವಾ ಮುನ್ಸೂಚನೆ ಪ್ರಕಾರ ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ,ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು,ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ರಾಜ್ಯದ ಇತರೆ ಭಾಗಗಳಲ್ಲೂ ಸಾಧಾರಣ ಪ್ರಮಾಣದ ಮಳೆಯಾಗಿದೆ.

ಉತ್ತರಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಕಡೆ ಉತ್ತಮ ಮಳೆಯಾಗಿದೆ. ಸ್ಥಳೀಯ ಹವಾ ಮುನ್ಸೂಚನೆ ಪ್ರಕಾರ ಬೆಂಗಳೂರು ಹಾಗೂ ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಂಭವವಿದೆ. ಆಗಸ್ಟ್ 22ರ ನಂತರ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

Facebook Comments