ಉತ್ತರ ಪ್ರದೇಶ, ಬಿಹಾರಕ್ಕೆ ವರುಣಾಘಾತ, 80ಕ್ಕೂ ಹೆಚ್ಚು ಜನ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೊ/ಪಾಟ್ನಾ, ಸೆ.29-ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದಲ್ಲಿ ಭಾರೀ ಆವಾಂತರಗಳನ್ನು ಸೃಷ್ಟಿಸಿ ಸಾವು-ನೋವುಗಳಿಗೆ ಕಾರಣವಾಗಿದ್ದ ಮಳೆಯ ಆರ್ಭಟ ಈಗ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ರೌದ್ರಾವತಾರ ತಾಳಿದೆ.  ಕಳೆದ ನಾಲ್ಕು ದಿನಗಳಿಂದ ಈ ಎರಡು ರಾಜ್ಯಗಳ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಈ ವರೆಗೆ 80ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಕೆಲವರು ಕಣ್ಮರೆಯಾಗಿದ್ದಾರೆ.

ಉತ್ತರಪ್ರದೇಶದ ಪೂರ್ವಭಾವ ಅಕ್ಷಶಃ ಜಲಪ್ರಳಯದಿಂದ ನಲುಗಿದೆ. ಪ್ರಯಾಗರಾಜ್ ಮತ್ತು ವಾರಣಾಸಿಯಲ್ಲಿ ದಾಖಲೆಯ ಪ್ರಮಾಣದ ಭಾರೀ ಮಳೆಯಾಗಿದ್ದು, ಸಾವು-ನೋವಿನ ವರದಿಯಾಗಿದೆ. ಪೂರ್ವಭಾಗದ ಬಹುತೇಕ ನದಿ ಮತ್ತು ಉಪನದಿಗಳು ಬೋರ್ಗರೆಯುತ್ತಿದ್ದು, ಅಪಾಯಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ತುರ್ತು ರಕ್ಷಣೆ ಮತ್ತು ಪರಿಹಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

ಅತ್ತ ಬಿಹಾರದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ, ರಾಜ್ಯದ ಹಲವೆಡೆ ವರುಣಾರ್ಭಟದಿಂದ ಸಾವು-ನೋವು ಸಂಭವಿಸಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಮತ್ತು ಬೆಳೆ ನಷ್ಟವಾಗಿದೆ.  ಬಿಹಾರದಲ್ಲೂ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನೂರಾರು ಹೆಕ್ಟೇರ್ ಕೃಷಿಪ್ರದೇಶಗಳು ಜಲಾವೃತವಾಗಿವೆ.
ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ನೆರವು ನೀಡುವಂತೆ ಮುಖ್ಯಮಂತ್ರಿ ನಿತಿಶ್‍ಕುಮಾರ್ ರಾಜ್ಯ ವಿಪತ್ತು ನಿರ್ವಹಣಾ ದಳಕ್ಕೆ ಸೂಚನೆ ನೀಡಿದ್ದಾರೆ.

ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಮುಂದಿನ 48ಗಂಟೆಗಳಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಮ್‍ಡಿ) ಮುನ್ಸೂಚನೆ ನೀಡಿದೆ.
ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲೂ ಮುಂದಿನ 24 ತಾಸುಗಳಲ್ಲಿ ಭಾರೀ ವರ್ಷಧಾರೆಯಾಗಲಿದೆ ಎಂದು ಐಎಮ್‍ಡಿ ತಿಳಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

Facebook Comments