ಭಾರೀ ಮಳೆ : ಎರಡು ಆಟೋ ಜಖಂ, ಬಾಗಿರುವ ಮರಗಳ ತೆರವಿಗೆ ಸಾರ್ವಜನಿಕರ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಅ.5-ಭಾರೀ ಗಾಳಿ ಮಳೆಗೆ ಹೊಸ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರವಾಸಿಮಂದಿರದ ಮುಂಭಾಗ ಮರವೊಂದು ಉರುಳಿ ಬಿದ್ದು ಎರಡು ಆಟಗಳು ಜಖಂಗೊಂಡಿವೆ. ಆಟೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಎಲ್ಲರೂ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ತುಮಕೂರು ಟೌನ್‍ನಿಂದ ರೈಲ್ವೆ ಸ್ಟೇಷನ್ ರಸ್ತೆಯಾದ ಪ್ರವಾಸಿಮಂದಿರದ ಮುಂಭಾಗ ಎರಡು ಆಟೋಗಳು ಬರುತ್ತಿದ್ದ ಸಂದರ್ಭದಲ್ಲಿ ಮರ ಉರುಳಿಬಿದ್ದಿದೆ. ಆಟೋದಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಎರಡು ಆಟಗಳು ಜಖಂಗೊಂಡಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ತಿಳಿದ ಕೂಡಲೇ ತುಮಕೂರಿನ ಹೊಸ ಬಡಾವಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪಾಲಿಕೆ ಅಧಿಕಾರಿಗಳು, ಅಗ್ನಿಶಾಮಕ ದಳದವರು ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.

ಬಾಗಿರುವ ಮರಗಳ ತೆರವಿಗೆ ಒತ್ತಾಯ: ಇನ್ನು ಮೂರ್ನಾಲ್ಕು ಮರಗಳು ಬೀಳುವ ಸಾಧ್ಯತೆ ಇದೆ. ಟೌನ್‍ಹಾಲ್ ವೃತ್ತದಿಂದ ಹಿಡಿದು ರೈಲ್ವೆ ಸ್ಟೇಷನ್‍ವರೆಗೆ ಎರಡೂ ಬದಿ ಇರುವ ಸಾಲುಮರಗಳಲ್ಲಿ ಕೆಲವು ಮರಗಳು ಈಗಾಗಲೇ ಬಾಗಿವೆ. ಇತ್ತ ಗಮನ ಹರಿಸಿ ಮರಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಲ್ಲದೆ ತುಮಕೂರು ಮಹಾನಗರ ಪಾಲಿಕೆಯ ಆವರಣದ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಮುಂಭಾಗ ರೈಲ್ವೆ ಸ್ಟೇಷನ್ ರಸ್ತೆಯ ಮರವೊಂದು ಉರುಳಿಬಿದ್ದಿದೆ.

ಇಲ್ಲಿ ಜನಸಂದಣಿ ಹೆಚ್ಚಾಗಿದ್ದು, ಕ್ಯಾಂಟೀನ್ ಇರುವ ಪರಿಣಾಮ ಉಪಹಾರಕ್ಕೆಂದು ಸಾಕಷ್ಟು ಮಂದಿ ಬರುತ್ತಿರುತ್ತಾರೆ. ಬೆಳಗ್ಗೆ 8 ಗಂಟೆ ಸಂದರ್ಭದಲ್ಲಿ ಮರದ ಬೇರು ಹಾಳಾಗಿದ್ದ ಪರಿಣಾಮ ನಿಧಾನವಾಗಿ ಮರ ಉರುಳಿ ಬಿದ್ದಿದೆ. ಮರದ ಬೇರು ಕಟಕಟ ಎಂದು ಶಬ್ದದಿಂದರಿಂದ ಜನರು ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.

ಒಟ್ಟಾರೆ ಇಂತಹ ಹಲವಾರು ಮರಗಳು ರೈಲ್ವೆ ನಿಲ್ದಾಣದ ಸಮೀಪ ಹಾಗೂ ಇತರ ಕಡೆ ಸಾಕಷ್ಟು ಮರಗಳು ಬೀಳುವ ಹಂತದಲ್ಲಿದ್ದು, ಕೂಡಲೇ ಇವುಗಳ ತೆರವಿಗೆ ಮುಂದಾಗಬೇಕೆಂದು ಸಂಭಾವ್ಯ ಅನಾಹುತಗಳು ತಪ್ಪಿದಂತಾಗುತ್ತದೆ ಎಂದು ಹೇಳಿದ್ದಾರೆ.

Facebook Comments