ದಿಢೀರ್ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಕಂಗಾಲು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9- ನಿನ್ನೆ ರಾತ್ರಿ ದಿಢೀರ್ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ನಗರದ ಅರ್ಧದಷ್ಟು ಪ್ರದೇಶದ ರಸ್ತೆಗಳು ಕೆರೆಗಳಂತಾದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ನಾಗರೀಕರು ರಾತ್ರಿಯಿಡೀ ನಿದ್ದೆಯಿಲ್ಲದೆ ಪರದಾಡುವಂತಾಯಿತು.

ಕೆ.ಆರ್.ಪುರಂ ವ್ಯಾಪ್ತಿಯ ಹೊರಮಾವು ವಾರ್ಡ್‍ನ ಸಾಯಿ ಬಡಾವಣೆ ಹಾಗೂ ವಡ್ಡರಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಯಿತು.

ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದಿನಸಿ, ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ನಾಶವಾಯಿತು. ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೂ ಯಾರೊಬ್ಬರು ಸಕಾಲಕ್ಕೆ ಸ್ಥಳಕ್ಕೆ ಆಗಮಿಸಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆಣ್ಣೂರು, ಹುಳಿಮಾವು ಮತ್ತಿತರ ಪ್ರದೇಶಗಳ ರಸ್ತೆಗಳೆಲ್ಲ ಕೆರೆಗಳಂತಾಗಿತ್ತು.

ಸಾರ್ವಜನಿಕರೂ ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಬೆಳಗ್ಗೆ ಕೆಲಸ ಕಾರ್ಯಗಳಿಗೆ ತೆರಳಲು ಸಾಧ್ಯವಾಗದೆ ಪರದಾಡಿದರು. ದಾಸರಹಳ್ಳಿಯ ದ್ವಾರಕಾನಗರದಲ್ಲಿರುವ ರಾಜಕಾಲುವೆ ಒಡೆದು ಇಡೀ ಪ್ರದೇಶ ಕೊಳಚೆ ನೀರಿನಿಂದ ತುಂಬಿಹೋಗಿತ್ತು.

ಅಲ್ಲಿನ ಕೆಲ ಮನೆಗಳಿಗೆ ಕೋಡಿ ನೀರು ಹರಿದು ಇಡೀ ರಾತ್ರಿ ದುರ್ಗಂಧ ಬೀರುವ ನೀರನ್ನು ಹೊರಹಾಕಲು ಹರಸಾಹಸ ಪಟ್ಟರು.  ತಗ್ಗುಪ್ರದೇಶಗಳಲ್ಲಿರುವ ಹಲವಾರು ಅಪಾರ್ಟ್‍ಮೆಂಟ್‍ಗಳ ಬೇಸ್‍ಮೆಂಟ್‍ನಲ್ಲಿ ಆಳುದ್ದ ನೀರು ನಿಂತ ಹಿನ್ನೆಲೆಯಲ್ಲಿ ಕಾರು, ದ್ವಿಚಕ್ರ ಮತ್ತಿತರ ವಾಹನಗಳು ಮುಳುಗಡೆಯಾದವು.

ಅದೇ ರೀತಿ ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ , ವಿಜಯನಗರ , ಪಂತರಪಾಳ್ಯ , ಮೈಸೂರು ರಸ್ತೆ , ಹೆಬ್ಬಾಳ, ತುಮಕೂರು ರಸ್ತೆ ಸೇರಿದಂತೆ ನಗರದ ಹಲವಾರು ಪ್ರದೇಶಗಳು ರಾತ್ರಿ ಸುರಿದ ದಿಢೀರ್ ಮಳೆಗೆ ತತ್ತರಿಸಿ ಹೋಯಿತು. ಮಳೆ ಅನಾಹುತ ಪ್ರದೇಶಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಳೆ ಅನಾಹುತಗಳನ್ನು ಸರಿಪಡಿಸಲು ಅಧಿಕಾರಿಗಳು ಶ್ರಮಿಸುವಂತೆ ಕರೆ ನೀಡಿದರು. ಯಾವುದೇ ಅನಾಹುತವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.

Facebook Comments