ನಾಳೆಯಿಂದ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆ, ಕಾದಿದೆ ಗಂಡಾಂತರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.27-ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಆರ್ಭಟಿಸುತ್ತಿದ್ದ ಮಳೆ ಕಡಿಮೆಯಾಗಿದ್ದು, ಅಕ್ಟೋಬರ್ 29ರ ನಂತರ ಮತ್ತೊಂದು ಸುತ್ತಿನ ಮಳೆಯಾಗುವ ಸಾಧ್ಯತೆಗಳಿವೆ. ಈ ನಡುವೆ ನೈರುತ್ಯ ಮುಂಗಾರು ಅವಧಿ ಮುಗಿಯುತ್ತಿದ್ದು, ನಾಳೆ ಈಶಾನ್ಯ ಹಿಂಗಾರು ಆರಂಭವಾಗುವ ಮುನ್ಸೂಚನೆಗಳಿವೆ.

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತಕ್ಕೆ ಪೂರಕವಾದ ವಾತಾವರಣ ಉಂಟಾಗಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಅಲ್ಲದೆ ಅರಬ್ಬಿಸಮುದ್ರದಲ್ಲಿ ಮೇಲ್ಮನೆ ಸುಳಿಗಾಳಿ ಉಂಟಾಗಿರುವುದರಿಂದ ಮತ್ತೊಂದು ಸುತ್ತಿನ ಮಳೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ ತಿಂಗಳಿನಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ನಾಳೆಯಿಂದ ಈಶಾನ್ಯ ಹಿಂಗಾರು ಆರಂಭವಾಗುವ ಮುನ್ಸೂಚನೆಗಳಿವೆ.

ಹೀಗಾಗಿ ಮುಂಗಾರು ಮುಗಿಯುತ್ತಿದ್ದಂತೆ ಹಿಂಗಾರು ಮಳೆ ಕೂಡ ಆರಂಭವಾಗಲಿದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಪೂರಕವಾದ ವಾತಾವರಣಗಳು ಉಂಟಾಗುತ್ತಿರುವುದರಿಂದ ಮತ್ತೆ ಮಳೆ ಮುಂದುವರೆಯುವ ಸಾದ್ಯತೆಗಳು ಹೆಚ್ಚಾಗಿವೆ.

ಆದರೆ ಭಾರೀ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳೇನೂ ಕಂಡುಬರುತ್ತಿಲ್ಲ ಎಂದು ಅವರು ಹೇಳಿದರು. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಉತ್ತರಕರ್ನಾಟಕದ ಕೆಲವು ಭಾಗದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಬೆಳೆ, ಆಸ್ತಿಪಾಸ್ತಿ ಹಾನಿಯಾಗಿದೆ.

ಅಲ್ಲದೆ ಅತಿವೃಷ್ಟಿಯಿಂದಾಗಿಯೂ ರಾಗಿ, ಶೇಂಗಾ, ಅಲಸಂದೆ, ಭತ್ತ ಮೊದಲಾದ ಬೆಳೆಗಳು ಹಾನಿಗೀಡಾಗಿವೆ. ಸದ್ಯಕ್ಕೆ ರಾಜ್ಯದಲ್ಲಿ ಉತ್ತಮವಾದ ಮಳೆಯಾಗುತ್ತಿದ್ದು, ಕೊಯ್ಲಿಗೆ ಬಂದಿರುವ ಬೆಳೆಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.

Facebook Comments