ಬ್ರೇಕಿಂಗ್ : ರಾಜ್ಯದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆಯು ಮುನ್ಸೂಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11- ವರುಣನ ಅಟ್ಟಹಾಸಕ್ಕೆ ಈಗಾಗಲೇ ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಜನರು ತತ್ತರಿಸಿ ಹೋಗಿರುವ ನಡುವೆಯೇ ಇದೇ 14ರವರೆಗೂ ರಾಜ್ಯದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

ಮಳೆ ಹೆಚ್ಚುವ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಆ.13ರವರೆಗೂ ರೆಡ್ ಅಲರ್ಟ್ ಹಾಗೂ ಚಾಮರಾಜನಗರ, ಚಿತ್ರದುರ್ಗ, ಮೈಸೂರು, ತುಮಕೂರು, ಬೀದರ್, ಕಲಬುರಗಿ, ರಾಯಚೂರು, ಮತ್ತು ಯಾದಗಿರಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಸಾಧಾರಣ ಮಳೆ ಬೀಳುವ ಸಾಧ್ಯತೆಗಳಿವೆ. ಆಗಸ್ಟ್.11ರ ಬಳಿಕ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣೆ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರು, ಕಾರವಾರ ಸಮುದ್ರದಲ್ಲಿ ಎತ್ತರದ ಅಲೆಗಳು ಅಪ್ಪಳಿಸಲಿದ್ದು, ಅಕ್ಕಪಕ್ಕದ ಗ್ರಾಮಗಳ ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ಆ.11ರಂದು ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗುವ ಲಕ್ಷಣವಿರುವುದರಿಂದ ಆರೆಂಜ್ ಅಲರ್ಟ್ ಹಾಗೂ ಆ.12 ಮತ್ತು 13ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್ , ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಮಳೆ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದೆ. ರಾಜ್ಯ ಕರಾವಳಿ, ದಕ್ಷಿಣ ಒಳನಾಡು, ಹಾಗೂ ಉತ್ತರ ಒಳನಾಡಿನಲ್ಲಿ ಆಗಸ್ಟ್.14ರವರೆಗೂ ಅತಿಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ.

ಕೊಡಗಿನಲ್ಲಿ 2 ದಿನಗಳಿಂದ ಮಳೆಯ ತೀವ್ರತೆ ಕಡಿಮೆಯಾಗಿದೆ. ಆದರೆ, ಇಂದಿನಿಂದ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆಗಸ್ಟ್ 31 ರವರೆಗೆ ಕೊಡಗಿನಲ್ಲಿ ಲಘು ವಾಹನಗಳ ಓಡಾಟ ನಿಷೇಧಿಸಲಾಗಿದೆ.

ಮಲ್ಟಿ ಆಕ್ಸಲ್ ಟ್ರಕ್, ಬುಲೆಟ್ ಟ್ಯಾಂಕರ್ಸ್ ಮತ್ತು ಕಂಟೈನರ್ ಲಾರಿ ಓಡಾಟವನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಮರಳು, ಮರದ ದಿಮ್ಮಿ ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲೂ ಹಲವೆಡೆ ಮಳೆಯಿಂದ ಭಾರೀ ಹಾನಿಯಾಗಿದೆ. ಉತ್ತರ ಕನ್ನಡದಲ್ಲಿ ರಸ್ತೆಗಳು ಕುಸಿದಿವೆ. ಹಲವೆಡೆ ನದಿ ತುಂಬಿ ಹರಿದು, ಗ್ರಾಮಗಳಿಗೆ ನೀರು ನುಗ್ಗಿದೆ. ಕರ್ನಾಟಕದಲ್ಲಿ 80 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1,600 ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ.

28 ಮನೆಗಳು ಸಂಪೂರ್ಣ ಹಾನಿಯಾಗಿವೆ. 2,140 ಮನೆಗಳು ಬಹುತೇಕ ಹಾನಿಗೊಳಗಾಗಿವೆ. ರಾಜ್ಯದ 31,541 ಹೆಕ್ಟೇರ್ ಬೆಳೆ ಮತ್ತು 35,000 ತೋಟಗಾರಿಕಾ ಬೆಳೆಗಳು ಮಳೆಯಿಂದ ನಾಶವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಮಳೆ ಹಿನ್ನೆಲೆಯಲ್ಲಿ ಕೆಆರ್‍ಎಸ್ ಡ್ಯಾಂನಿಂದ ಹೊರ ಹರಿವಿನಲ್ಲಿ ಭಾರೀ ಇಳಿಕೆಯಾಗಿದೆ. 74 ಸಾವಿರ ಕ್ಯೂಸೆಕ್ ನಿಂದ 3 ಸಾವಿರ ಕ್ಯೂಸೆಕ್ಸ್‍ನಷ್ಟು ಹೊರಹರಿವಿದೆ. ಮಳೆ ಕಡಿಮೆಯಾಗಿರುವುದರಿಂದ ಒಳ ಹರಿವು ಕೂಡ ಕಡಿಮೆಯಾಗುತ್ತಿದ್ದು, ಡ್ಯಾಂ ಭರ್ತಿಮಾಡಿಕೊಳ್ಳುವ ಸಲುವಾಗಿ ಅಧಿಕಾರಿಗಳು ಹೊರ ಹರಿವು ಇಳಿಸಿದ್ದಾರೆ. ಡ್ಯಾಂ ಸಂಪೂರ್ಣ ಭರ್ತಿಯಾಗಲು ಇನ್ನೂ 4 ಅಡಿ ಬಾಕಿ ಇದೆ.

ಪ್ರಸ್ತುತ 121.12 ಅಡಿ ಭರ್ತಿಯಾಗಿರುವ ಕೆಎಆರ್‍ಎಸ್, ಸುರಕ್ಷಿತಾ ದೃಷ್ಟಿಯಿಂದ ಡ್ಯಾಂ ತುಂಬುವ ಮುನ್ನವೇ ನದಿಗೆ ನೀರು ಬಿಡಲಾಗುತ್ತಿತ್ತು. ಮೂರ್ನಾಲ್ಕು ದಿನಗಳ ಕಾಲ ಅಧಿಕಾರಿಗಳು 74 ಕ್ಯೂಸೆಕ್ ನೀರು ಬಿಡುತ್ತಿದ್ದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಡ್ಯಾಂ ಇಂದಿನ ನೀರಿನ ಮಟ್ಟ 121.12 ಅಡಿ ಇದೆ. ಗರಿಷ್ಟ ಮಟ್ಟ 124.80 ಅಡಿ, ಒಳ ಹರಿವು 40,794 ಕ್ಯೂಸೆಕ್, ಹೊರ ಹರಿವು- 3575 ಕ್ಯೂಸೆಕ್, ನೀರಿನ ಸಂಗ್ರಹ-44.479, ಗರಿಷ್ಠ ಸಂಗ್ರಹ ಸಾಮಥ್ರ್ಯ 49.50 ಟಿಎಂಸಿ ಆಗಿದೆ.

ಇತ್ತ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಆತಂಕ ದೂರವಾಗಿದೆ. ಬಸವಸಾಗರ ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

1.50 ಲಕ್ಷ ಕ್ಯೂಸೆಕ್ ಹೊರ ಹರಿವು ಇದ್ದು, ಈಗ 25,670 ಕ್ಯೂಸೆಕ್ ಆಗಿದೆ. ಬಸವಸಾಗರ ಜಲಾಶಯಕ್ಕೆ ಸದ್ಯ 40000 ಒಳ ಹರಿವು ಇದೆ. ಜಲಾಶಯದಲ್ಲಿ 29 ಟಿಎಂಸಿ ಮತ್ತು 491.45 ಮೀಟರ್ ನೀರು ಸಂಗ್ರಹವಾಗಿದ್ದು, ಜಲಾಶಯ ಒಟ್ಟು 33.313 ಟಿಎಂಸಿ, 492.25 ಮೀಟರ್ ನೀರು ಸಂಗ್ರಹದ ಸಾಮಥ್ರ್ಯ ಹೊಂದಿದೆ.

Facebook Comments

Sri Raghav

Admin