ದೇಶದ ಕೆಲವು ರಾಜ್ಯಗಳಲ್ಲಿ ಇನ್ನೆರೆಡು ದಿನದಲ್ಲಿ ಭಾರೀ ಮಳೆ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ದೆಹಲಿ,ಆ.14-ಮಹಾರಾಷ್ಟ್ರ ಮತ್ತು ನವದೆಹಲಿ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಮುಂದಿನ 2-3 ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಗೋವಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ವರ್ಷಧಾರೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

ದೇಶದ 16 ರಾಜ್ಯಗಳಲ್ಲಿ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾದ ಮುಂಗಾರು ಮಳೆಯ ಆರ್ಭಟ ಇನ್ನೂ ಕೆಲವು ರಾಜ್ಯಗಳಿಗೆ ವಿಸ್ತರಿಸಿದ್ದು, ವರುಣ ಹಾವಳಿಯಿಂದ ಜನಜೀವನ ಅಯೋಮಯವಾಗಿದೆ.

ಉತ್ತರಪ್ರದೇಶದ ಕೆಲವೆಡೆ ಭಾರೀ ಮಳೆಯಿಂದ ಕಟ್ಟಡದ ಗೋಡೆ ಕುಸಿದು ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ಧಾರೆ. ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಜಲಾವೃತವಾಗಿದ್ದು, ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಅನೇಕ ಮನೆಗಳಿಗೆ ಹಾನಿಯಾಗಿವೆ. ರಾಜಧಾನಿ ದೆಹಲಿಯಲ್ಲಿ ಮುಂಗಾರು ಋತುವಿನಲ್ಲೇ ಗರಿಷ್ಠ ವರ್ಷಧಾರೆಯಾಗಿದೆ. ಮಹಾರಾಷ್ಟ್ರ ರಾಜಧಾನಿ ಮುಂಬೈ, ಥಾಣೆ, ಪಾಲ್‍ಗಢ್ ಮತ್ತು ರಾಯ್‍ಗಢ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಅನೇಕ ಪ್ರದೇಶಗಳು ಜಲಾವೃತವಾಗಿದೆ.

ಮುಂದಿನ 2-3 ದಿನಗಳಲ್ಲಿ ಮಹಾರಾಷ್ಟ್ರದ ಕೊಂಕಣ್ ಪ್ರಾಂತ್ಯ ಮತ್ತು ಮಧ್ಯ ಮಹಾರಾಷ್ಟ್ರದ ಕೆಲವೆಡೆ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಗಿರಿಧಾಮ ರಾಜ್ಯ ಉತ್ತರಾಖಂಡದಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ಅಪಾರ ಹಾನಿ ಸಂಭವಿಸಿದೆ. ಅನೇಕ ಮನೆಗಳಿಗೆ ಹಾನಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದಾಗಿ ಕೆಲವೆಡೆ ಗುಡ್ಡ ಕುಸಿದು ರಸ್ತೆಗಳಿಗೂ ಹಾನಿಯಾಗಿದೆ.

Facebook Comments

Sri Raghav

Admin