ಗೋವಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ತಗ್ಗು ಪ್ರದೇಶಗಳು ಜಲಾವೃತ..!

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, ಜೂ.3-ಅರಬ್ಬೀ ಸಮುದ್ರದಲ್ಲಿ ನಿಸರ್ಗ ಚಂಡಮಾರುತದ ಆರ್ಭಟದಿಂದ ವಾಯುಭಾರ ಕುಸಿತವಾಗಿದ್ದು, ಗೋವಾದಲ್ಲಿ ಇಂದು ಮುಂಜಾನೆಯಿಂದಲೇ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.  ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಹಸ್ರಾರು ಮಂದಿ ಸಂತ್ರಸ್ತರಾಗಿದ್ದಾರೆ.

ಗೋವಾ ಕರಾವಳಿ ಪ್ರದೇಶದ ಸಮುದ್ರ ಭಾಗವು ಪ್ರಕ್ಷುಬ್ಧಗೊಂಡಿದ್ದು, ಮೀನುಗಾರರು ಸಾಗರಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸ್ಪಷ್ಟ ಸೂಚನೆ ನೀಡಿದೆ.ಪ್ರಬಲ ಗಾಳಿಯಿಂದ ಕೂಡಿದ ಧಾರಾಕಾರ ಮಳೆಯಿಂದಾಗಿ ಗೋವಾದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ತೀವ್ರ ತೊಂದರೆಗೆ ಒಳಗಾದರು.

ಜಲಾವೃತವಾಗಿರುವ ತಗ್ಗು ಪ್ರದೇಶಗಳಿಂದ ಜನರನ್ನು ರಕ್ಷಿಸಿ ಲೈಫ್‍ಗಾರ್ಡ್ ಏಜೆನ್ಸಿ ದೃಷ್ಟಿ ಕಾರ್ಯಕರ್ತರು ಕಾರ್ಯೋನ್ಮುಖವಾಗಿದೆ.  ಗೋವಾ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮುಂದಿನ 24 ತಾಸುಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಧಾರಾಕಾರ ವರ್ಷಧಾರೆಯಿಂದ ಯಾವುದೇ ಪರಿಸ್ಥಿತಿ ನಿಭಾಯಿಸಲು ರಕ್ಷಣಾ ಕಾರ್ಯಕರ್ತರು ಸಮರೋಪಾದಿಯಲ್ಲಿ ಸಜ್ಜಾಗಿದ್ದಾರೆ.

Facebook Comments