ಮಲೆನಾಡಿನಲ್ಲಿ ಮಳೆ ಅಬ್ಬರ, ಜನರ ಬದುಕು ಮೂರಾಬಟ್ಟೆ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಸೆ.8- ಮಲೆನಾಡಿನ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ವರುಣನ ಆರ್ಭಟಕ್ಕೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿದೆ.

ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಎನ್‍ಆರ್‍ಪುರ ತಾಲೂಕುಗಳಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.ಕಳೆದ ಮೂರು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರಗೆ ಬರಲು ಆಗದೇ, ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ.

ಕೂಲಿ ಕಾರ್ಮಿಕರಿಗೆ ಕೂಲಿ ಇಲ್ಲದೆ ವಾರದ ಸಂತೆ ಮಾಡಲು ಹಣ ಇಲ್ಲದಂತಾಗಿದೆ.ಜಿಲ್ಲೆಯ ಜೀವನದಿಗಳಾದ ತುಂಗಾ, ಭದ್ರ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಮಳೆ ಬರಲಿ ಎಂದು ಆಕಾಶ ನೋಡುತ್ತ ಪ್ರಾರ್ಥಿಸುತ್ತಿದ್ದ ಜನ ಈಗ ಮಳೆ ನಿಲ್ಲಲಿ ಎಂದು ದೇವರಲ್ಲಿ ಮೊರೆ ಇಡುತ್ತಿದ್ದಾರೆ.

ಕಳೆದ ತಿಂಗಳಲ್ಲಿ ಮಳೆಯಿಂದಾಗಿ ಹಲವು ಅನಾಹುತ ಸೃಷ್ಟಿಯಾಗಿದ್ದು, ಮಳೆರಾಯ ಒಂದು ವಾರ ಬಿಡುವು ನೀಡಿತ್ತು. ನಂತರ ಜನಜೀವನವು ಸಹಜ ಸ್ಥಿತಿಗೆ ಬಂದಿತ್ತು. ಆದರೆ ಈಗ ಮತ್ತೆ ಮಳೆಯಾಗಿರುವುದರಿಂದ ಮೂಡಿಗೆರೆ ಸಮೀಪದ ಹಂಡುಗೂಳಿ ಗ್ರಾಮದಲ್ಲಿ ಸುಧೀರ್ ಎಂಬುವರ ಕಾಫಿ ತೋಟ ಭೂಕುಸಿತದಿಂದಾಗಿ ಒಂದು ಎಕರೆ ತೋಟವು ಸಂಪೂರ್ಣ ನಾಶವಾಗಿದೆ.ಕೊಟ್ಟಿಗೆಹಾರದಲ್ಲಿ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತ ಕಂಡು ಬಂದಿದ್ದು, ನಿನ್ನೆ 125.6ಮಿ.ಮೀ ಮಳೆಯಾಗಿದೆ.

ಚಾರ್ಮುಡಿ ಘಾಟ್ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಬಳಿ 4ಕಡೆ ಗುಡ್ಡ ಕುಸಿದಿದ್ದು, ಮಂಗಳೂರು-ಚಿಕ್ಕಮಗಳೂರಿಗೆ ತೆರಳುವ ವಾಹನ ಸಂಚಾರ ಸ್ಥಗಿತಗೊಂಡಿದೆ. ಒಂದು ಕಡೆಯಿಂದ ಒದ್ದೆ ಮಣ್ಣು ತೆರೆವು ಕಾರ್ಯಾಚರಣೆ ಮಾಡುತ್ತಿದ್ದಾರೆ ಮತ್ತೊಂದು ಕಡೆ ಮಳೆಯಿಂದ ಗುಡ್ಡ-ಮಣ್ಣು ಕುಸಿಯುತ್ತಿದೆ.

ಜೆಸಿಬಿ ಯಂತ್ರದಿಂದ ಮಣ್ಣಿ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.ಗಣೇಶನಿಗೆ ತಟ್ಟಿದ ಮಳೆ :ಗಣೇಶ ಹಬ್ಬದ ಅಂಗವಾಗಿ ಮಲೆನಾಡಿನಲ್ಲಿ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿತ್ತು. ಆದರೆ ಗಣಪತಿ ವಿಸರ್ಜನೆ ಮಳೆ ಅಡ್ಡಿಯಾಗಿದ್ದು, ಮೂರ್ತಿಗಳಿಗೆ ಪ್ಲಾಸ್ಟಿಕ್ ಹೊದಿಕೆಯನ್ನು ಹೊದಿಸಿ ವಿಸರ್ಜನೆ ಮಾಡಲಾಯಿತು.

Facebook Comments

Sri Raghav

Admin