ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟ, ಕೊಚ್ಚಿ ಹೋದ ಸೇತುವೆ, ಆಸ್ಪತ್ರೆ, ಶಾಲೆಗೆ ನುಗ್ಗಿದ ನೀರು..!

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ/ವಿಜಯಪುರ/ಕೊಪ್ಪಳ,ಜೂ 24- ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಬೆಳಗಾವಿ, ಕೊಪ್ಪಳ, ವಿಜಯಪುರ ಜಿಲ್ಲೆಗಳ ಹಲವು ಭಾಗಗಳಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಅವಾಂತರವೇ ಸೃಷ್ಠಿಯಾಗಿದೆ.

ಬೆಳಗಾವಿಯ ಯಕ್ಸಾಂಬಾದಲ್ಲಿ ಮಳೆ ನೀರು ಮನೆಗೆ ನುಗ್ಗಿದ ಪರಿಣಾಮ ವೃದ್ಧೆಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ. ಕೊಪ್ಪಳದ ಕಿನ್ನಾಳದಲ್ಲಿ ನಿರ್ಮಾಣ ಹಂತದ ಚೆಕ್ ಡ್ಯಾಂ ನಿರೀನಲ್ಲಿ ಕೊಚ್ಚಿ ಹೋಗಿದ್ದು,ಅಪಾರ ನಷ್ಟ ಸಂಭವಿಸಿದೆ.

ಯಕ್ಸಾಂಬಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿ ಗರ್ಭಿಣಿಯರು ಮತ್ತು ರೋಗಿಗಳು ಪರದಾಡಬೇಕಾಯಿತು. ಹಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ಮನೆಗಳು ಕುಸಿದು ಬಿದ್ದಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಬಳ್ಳಾರಿಯ ಸಿರಗುಪ್ಪ ತಾಲೂಕಿನ ರಾರಾವಿ ಸೇತುವೆ ತುಂಬಿ ಹರಿದು ಸಂಪೂರ್ಣ ಮುಳುಗಡೆಯಾಗಿ ದಾರಿ ಕಾಣದೆ ಎರಡು ಲಾರಿ ಹಾಗೂ ಒಂದು ಬಸ್ ಮಗುಚಿ ಬಿದ್ದಿದೆ.

ಬಸ್ ಉರುಳಿ ಬೀಳುತ್ತಿದ್ದಂತೆ ಪ್ರಯಾಣಿಕರನ್ನು ರಕ್ಷಿಸಿದ್ದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಎರಡು ಲಾರಿಗಳು ಪಲ್ಟಿ ಹೊಡೆದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ಸೇತುವೆಗೆ ತಡೆಗೋಡೆ ಇಲ್ಲದಿರುವುದು ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ.

ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆಯು ಇದಾಗಿದೆ. ಪಟ್ಟಣದ ಎಲ್ಲ ಚರಂಡಿಗಳು ತುಂಬಿ. ರಸ್ತೆಗಳ ಮೇಲೆ ನೀರು ಹರಿದ ದೃಶ್ಯಗಳು ಸರ್ವಸಾಮಾನ್ಯವಾಗಿದ್ದವು.

ಪಟ್ಟಣದ ಪತ್ತಾರ ಕಟ್ಟಿ, ನೆಹರು ನಗರ, ಹಳಪೇಟೆ, ಹೂಸಪೇಟೆ, ಕಿಲ್ಲಾ ಓಣಿ , ತರಕಾರಿ ಮಾರುಕಟ್ಟೆ, ಶಾಲಾ ಮೈದಾನಗಳು ಸೇರಿದಂತೆ ಇನ್ನೂ ಹಲವಾರ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ರಸ್ತೆಗಳೆಲ್ಲಾ ತುಂಬಿ ತುಳುಕಾಡುತ್ತಿದ್ದವು. ತಗ್ಗು ಪ್ರದೇಶದ ರಸ್ತೆಗಳಲ್ಲಿ ಕೆಲ ಕಾಲನಿಂತ ನೀರಿನಿಂದ ಪಾದಚಾರಿಗಳಿಗೆ ತೊಂದರೆಯುಂಟಾಗಿದೆ.

ಬಿಳಗಿ ಸರ್ಕಾರಿ ಪ್ರಾಥಮಿಕ ಶಾಲೆ ನೀರು ನುಗ್ಗಿ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ವಿಜಯಪುರದಲ್ಲಿ ಸುರಿದ ಭಾರೀ ಮಳೆ ಪರಿಣಾಮ ಇಲ್ಲಿನ ಸಂಗಮನಾಥ ದೇವಾಲಯಕ್ಕೆ ನೀರು ಒಳ ನುಗ್ಗಿದೆ.

ತಿಕೋಟಾ ತಾಲೂಕಿನ ಕಳ್ಳಕವಟಗಿ ಬಳಿಯ ಹಳ್ಳ ತುಂಬಿ ಸಂಗಮನಾಥ ದೇವಾಲಯಕ್ಕೆ ನೀರು ನುಗ್ಗಿದ ಪರಿಣಾಮ ದೇವಾಲಯದ ಒಳಗಿದ್ದ ಪಲ್ಲಕ್ಕಿ ಸೇರಿದಂತೆ ಹಲವು ವಸ್ತುಗಳು ತೇಲಿ ಹೋಗಿದೆ.

ಯಲಬುರಗಿ ತಾಲೂಕಿನ ಸಂಗನಾಳದ ಬಳಿ ಹಳ್ಳದಲ್ಲಿ ಸಿಲುಕಿದ್ದ ಅಜ್ಜಿ ಮಲ್ಲಮ್ಮ ಹಾಗೂ ಮೊಮ್ಮಗಳು ಗಂಗಮ್ಮಳನ್ನು ಏಣಿ ಮತ್ತು ಹಗ್ಗದ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಇತ್ತ ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದ ಚಿಕ್ಕೋಡಿ ತಾಲೂಕಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಸದಲಗಾ, ಮಾಂಜರಿ, ಯಡೂರ, ಅಂಕಲಿ, ಚೆಂದೂರ, ಕಲ್ಲೋಳ ಮುಂತಾದ ಗ್ರಾಮಗಳಲ್ಲಿ ಭರ್ಜರಿ ಮಳೆ ಸುರಿದಿದೆ. ನಿನ್ನೆ ಸಂಜೆ 4.30 ಕ್ಕೆ ಆರಂಭವಾದ ಮಳೆ 6.30 ರವರೆಗೆ ಸುಮಾರು ಎರಡು ಗಂಟೆಗಳ ಕಾಲ ರಭಸದಿಂದ ಸುರಿದಿದೆ. ಕಳೆದ ಎರಡು ದಿನಗಳಿಂದ ಬಿಸಿಲನ ತಾಪ ಹೆಚ್ಚಳವಾಗಿತ್ತು.

ಭಾನುವಾರ ಸುರಿದ ಭಾರಿ ಮಳೆಯಿಂದ ಚಿಕ್ಕೋಡಿ ಗಡಿ ಭಾಗದ ಜನಕ್ಕೆ ತಂಪೆರೆದಂತಾಗಿದೆ. ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಸುರಿಯಬೇಕಾಗಿದ್ದ ಅಡ್ಡ ಮಳೆ ಸುರಿಯದ ಕಾರಣ ಗಡಿ ಭಾಗದ ಜನ ತೀವ್ರ ಸಂಕಷ್ಟ ಪಟ್ಟಿದ್ದರು. ಆದರೆ ನಿನ್ನೆ ಸುರಿದ ಭಾರಿ ಮಳೆಯಿಂದ ಗಡಿ ಭಾಗದ ಜನ ಸಂತಸದಲ್ಲಿದ್ದಾರೆ.

ಬೇಸಿಗೆಯಲ್ಲಿ ಕೃಷ್ಣಾ ನದಿ ಬತ್ತಿ ಹೋಗಿ ನದಿ ಪಾತ್ರದ ಜನರಿಗೆ ಕುಡಿಯಲು ನೀರಿಲ್ಲದ ಪರಿಣಾಮ ತೀವ್ರ ತೊಂದರೆ ಅನುಭವಿಸಿದರು. ನದಿ ಪಾತ್ರದಲ್ಲಿ ಬೆಳೆದ ಕಬ್ಬು ನೀರಿಲ್ಲದೆ ಕಮರಿ ಹೋಗಿತ್ತು. ಇದೀಗ ಭರ್ಜರಿ ಮಳೆ ಸುರಿದಿರುವುದರಿಂದ ಕಬ್ಬಿನ ಬೆಳೆಗೆ ಅನುಕೂಲವಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕಲ್ಲೂರ ಗ್ರಾಮದ ನಾಲೆಯಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನ ಅದನ್ನು ನೋಡಲು ಇದೀಗ ಬ್ರಿಡ್ಜ್ ನತ್ತ ಧಾವಿಸುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಈ ಪ್ರಮಾಣದ ಮಳೆ ಬಂದಿರುವುದರಿಂದ ರೈತಾಪಿ ವರ್ಗ ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Facebook Comments

Sri Raghav

Admin