ವರುಣನ ಆರ್ಭಟಕ್ಕೆ ಬೆಂಗಳೂರಲ್ಲಿ ಬಾಯ್ಬಿಟ್ಟ ಭೂಮಿ, ವಾಹನಗಳು ಜಖಂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.24- ಬೆಳ್ಳಂಬೆಳಗ್ಗೆ ಆರ್ಭಟಿಸಿದ ಗುಡುಗು-ಮಿಂಚು ಸಹಿತ ಭಾರೀ ಮಳೆಗೆ ಹಲವಾರು ಮರಗಳು ಉರುಳಿ ಬಿದ್ದಿದ್ದು, ವರುಣನ ರಭಸಕ್ಕೆ ರಸ್ತೆಯೊಂದು ಬಿರುಕು ಬಿಟ್ಟಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ಲಗ್ಗೆರೆಯ ಪ್ರೀತಿನಗರದಲ್ಲಿ ರಸ್ತೆ ಕುಸಿದು ಬಿದ್ದಿದ್ದು, ಕಾರು, ಬೈಕ್, ಆಟೋಗಳು ಸೇರಿ ಹಲವಾರು ವಾಹನಗಳು ಜಖಂಗೊಂಡಿವೆ.

ಪ್ರೀತಿನಗರದಲ್ಲಿ ರಸ್ತೆ ಕೆಳಭಾಗ ಚರಂಡಿ ಪೈಪ್ ಅಳವಡಿಸಿದ್ದು, ಕಳಪೆ ಕಾಮಗಾರಿಯಿಂದಾಗಿ ಪೈಪ್ ಅಳವಡಿಸಿದ್ದ ರಸ್ತೆ ಒಂದು ಕಿಲೋಮೀಟರ್‍ಗೂ ಹೆಚ್ಚು ಉದ್ದ ಬಿರುಕು ಬಿಟ್ಟಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಆಟೋ ಮತ್ತಿತರ ವಾಹನಗಳಿಗೆ ಹಾನಿಯಾಗಿದ್ದು, ಲಾಕ್‍ಡೌನ್ ಸಂದರ್ಭದಲ್ಲೂ ಜನ ಸಾಮಾಜಿಕ ಅಂತರ ಮರೆತು ಭಾರೀ ಉದ್ದದ ಬಿರುಕು ವೀಕ್ಷಿಸಲು ಸಾವಿರಾರು ಜನ ಸ್ಥಳಕ್ಕೆ ಆಗಮಿಸಿದ್ದರು.

ಮಾರ್ಗೋಸಾ ರಸ್ತೆ, ಯಶವಂತಪುರ ಪೊಲೀಸ್ ಠಾಣೆ, ಮಾರೇನಹಳ್ಳಿ, ಬಿಟಿಎಂ ಲೇಔಟ್, ಬಸವನಗುಡಿ, ರಾಜಾಜಿನಗರ, ನಂದಿದುರ್ಗ ರಸ್ತೆ, ತಿಮ್ಮಯ್ಯ ರಸ್ತೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ಬಸವೇಶ್ವರನಗರದ ಪುಣ್ಯ ಆಸ್ಪತ್ರೆ, ಅಗ್ರಹಾರ ದಾಸರಹಳ್ಳಿ ಹೆರಿಗೆ ಆಸ್ಪತ್ರೆ, ಮೂಡಲಪಾಳ್ಯ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಭಾರೀ ಗಾತ್ರದ ಮರಗಳು ಧರೆಗುರುಳಿವೆ.

ಬೆಳ್ಳಂಬೆಳಗ್ಗೆ ಮರಗಳು ರಸ್ತೆಗುರುಳಿದ್ದರಿಂದ ಹಾಗೂ ಕೆಲ ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಬಿಬಿಎಂಪಿ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

Facebook Comments

Sri Raghav

Admin