ಭಾರೀ ಮಳೆಗೆ ಮನೆ ಮೇಲೆ ಉರುಳಿಬಿದ್ದ ಮರ

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಅ.3- ತಾಲ್ಲೂಕಿನ ಬಾಣಾವರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ ಸಹಿತ ಮಳೆಯಾಗಿದ್ದು ಏಳು ಮನೆಗಳು ಹಾನಿಗೊಂಡಿದ್ದು, ನೂರಾರು ಮರಗಳು ನೆಲಕ್ಕುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ಬಾಣಾವರ ಹೋಬಳಿ ಕರಡಿ ಹಳ್ಳಿ ಗ್ರಾಮದ ವಾಸಿ ಅಂಗನವಾಡಿ ಕಾರ್ಯಕರ್ತೆ ಚೂಡಾಮಣಿ ಎಂಬುವವರು ತಮ್ಮ ಮೊಮ್ಮಗಳೊಂದಿಗೆ ಮನೆಯಲ್ಲಿ ಮಲಗಿದ್ದಾಗ ಭಾರೀ ಗಾತ್ರದ ಮರವೊಂದು ಬಿದ್ದು ಮನೆ ಜಖಂಗೊಂಡಿದೆ. ಅದೃಷ್ಟವಶಾತ್ ಅಜ್ಜಿ-ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆಯ ಆರ್ಭಟಕ್ಕೆ ಹೋಬಳಿಯ ಕೆಲವು ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದು ತಾವೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮತ್ತೆ ಕೆಲವು ಕಡೆ ಸಂಭವಿಸುವ ಹಾನಿ ಮತ್ತು ನಷ್ಟದ ಕುರಿತು ನಮ್ಮ ಅಧಿಕಾರಿಗಳ ತಂಡ ಮಾಹಿತಿ ಕಲೆ ಹಾಕಿದ್ದು ಸಂತ್ರಸ್ತರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Facebook Comments