ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.6-ಈಶಾನ್ಯ ಹಿಂಗಾರು ಚುರುಕಾಗಿದ್ದು, ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಹವಾಮುನ್ಸೂಚನೆ ಪ್ರಕಾರ ಇನ್ನು ಎರಡು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ.  ನಿನ್ನೆ ಸಂಜೆ ಹಾಗೂ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.

ರಾಜ್ಯದ ದಕ್ಷಿಣ ಒಳನಾಡಿನದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಅಲ್ಲದೆ ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರದವರೆಗೂ ಟ್ರಪ್ ಕೂಡ ನಿರ್ಮಾಣವಾಗಿತ್ತು.

ಇದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು.

ಹವಾ ಮುನ್ಸೂಚನೆ ಪ್ರಕಾರ ಇನ್ನು ಎರಡು ದಿನ ಮಳೆಯಾಗಲಿದೆ. ಇಂದು ಸಂಜೆ ಹಾಗೂ ರಾತ್ರಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಲಕ್ಷಣಗಳಿವೆ ಎಂದು ಹೇಳಿದರು.  ಆದರೆ ವಾಯುಭಾರ ಕುಸಿತ ಹಾಗೂ ಚಂಡಮಾರುತದಂತಹ ಲಕ್ಷಣಗಳು ವಾತಾವರಣದಲ್ಲಿ ಗೋಚರಿಸುತ್ತಿಲ್ಲ. ಮೇಲ್ಮೈ ಸುಳಿಗಾಳಿ ಪರಿಣಾಮ ಮಳೆಯಾಗುತ್ತಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಮಿ.ಮೀಟರ್‍ನಲ್ಲಿ ಬೆಂಗಳೂರು ದಕ್ಷಿಣ 167, ಬೆ.ಪಶ್ಚಿಮ 94, ಬೆ.ಪೂರ್ವ 40, ಬೆ.ಗ್ರಾಮಾಂತರ 42, ಆನೇಕಲ್ 58, ಮಂಡ್ಯ 89, ಹಾಸನ 76, ಕೊಡುಗು 50, ದಕ್ಷಿಣ ಕನ್ನಡ 110, ಚಾಮರಾಜನಗರ 75, ಮೈಸೂರು 86, ತುಮಕೂರು 63, ದಾವಣಗೆರೆ 48, ರಾಮನಗರ 108, ಕೋಲಾರ 44, ಗರಿಷ್ಟ ಪ್ರಮಾಣದ ಮಳೆಯಾದ ವರದಿಯಾಗಿದೆ.

Facebook Comments