ರಾಜ್ಯದಲ್ಲಿ ಮಳೆಯಿಂದ 100 ರಸ್ತೆ ಮತ್ತು ಸೇತುವೆಗಳು ಹಾಳಾಗಿವೆ : ಲೋಕೋಪಯೋಗಿ ಇಲಾಖೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.10- ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಕನಿಷ್ಠ 100 ರಸ್ತೆಗಳು ಮತ್ತು ಸೇತುವೆಗಳು ಹಾಳಾಗಿವೆ ಎಂದು ಲೋಕೋಪಯೋಗಿ ಇಲಾಖೆ ಅಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಸಂಭವಿಸಿದ್ದ ಪ್ರವಾಹ ಮತ್ತು ಮಳೆಯಿಂದಾಗಿ ಹಾನಿಗೀಡಾಗಿದ್ದ ರಸ್ತೆ ಮತ್ತು ಸೇತುವೆಗಳ ದುರಸ್ತಿ ಕಾರ್ಯವೇ ಇನ್ನೂ ಮುಗಿದಿಲ್ಲ. ಅದಾಗಲೇ ಮತ್ತೆ ಮಳೆ, ಪ್ರವಾಹದಿಂದಾಗಿ ಮತ್ತಷ್ಟು ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿವೆ. ನಿಜಕ್ಕೂ ಇದು ಇಲಾಖೆಗೆ ದೊಡ್ಡ ಸವಾಲಾಗಿದೆ ಎಂದು ಅಕಾರಿಗಳು ಹೇಳಿದ್ದಾರೆ.

ಕಳೆದ ವರ್ಷದ ಪ್ರವಾಹದಿಂದಾಗಿ ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾದ ಪರಿಣಾಮ ಹಲವು ಪ್ರದೇಶಗಳ ಸಂಪರ್ಕ ಕಡಿತವಾಗಿತ್ತು. ಈ ಸಮಸ್ಯೆಗಳನ್ನು ಸರಿ ಪಡಿಸಲು ಇಲಾಖೆ 7,900 ಕೋಟಿ ವ್ಯಯಿಸಬೇಕಾಯಿತು.

ಕಳೆದ ಬಾರಿ ಹಾನಿಗೀಡಾದ ಒಟ್ಟಾರೆ ರಸ್ತೆಗಳು, ಸೇತುವೆಗಳು ಒಳಚರಂಡಿ ಪೈಪ್ ಗಳ ಪೈಕಿ ಶೇ.70ರಷ್ಟು ಮಾತ್ರ ಈವರೆಗೂ ದುರಸ್ತಿ ಮಾಡಲಾಗಿದೆ.
ಬಾಕಿ ಕಾಮಗಾರಿಗೆ ಕಾರ್ಮಿಕರ ತೊಂದರೆ ಎದುರಾಗಿತ್ತು.

ಕೊರೋನಾ ಲಾಕ್‍ಡೌನ್ ಕೂಡ ನಮಗೆ ದೊಡ್ಡ ಸಮಸ್ಯೆಯಾಗಿತ್ತು. ನಮಗೆ ಮುಂದಿನ ದಿನಗಳು ಅತ್ಯಂತ ಪ್ರಮುಖವಾಗಿದ್ದು, ಮಳೆ ಮತ್ತು ಪ್ರವಾಹದಿಂದಾಗಿ ಮತ್ತಷ್ಟು ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಸಮಸ್ಯೆಯಿಂದಾಗಿ ನಾವು ಈ ಬಾರಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಮುರಿದ ರಸ್ತೆಗಳು ಮತ್ತು ಸೇತುವೆಗಳಿಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದೇವೆ ಎಂದು ಇಲಾಖೆ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿದ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್ ಅವರು, ಈಗಾಗಲೇ ರಾಜ್ಯಾದ್ಯಂತ ನೂರಾರು ತಂಡಗಳನ್ನು ರಚನೆ ಮಾಡಿದ್ದೇವೆ. ಪ್ರಮುಖವಾಗಿ ಘಾಟ್ ಪ್ರದೇಶಗಳಾದ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಪ್ರತೀ 15 ರಿಂದ 20 ಕಿ.ಮೀ ಗಳ ಅಂತರದಲ್ಲಿ ಜೆಸಿಬಿಗಳ ನಿಯೋಜನೆ ಮಾಡಿದ್ದೇವೆ.

ಒಂದು ವೇಳೆ ಮಳೆ ಮತ್ತು ಭೂಕುಸಿತದಿಂದಾಗಿ ಮರಗಳು ಧರೆಗುರುಳಿದರೆ, ಭೂಕುಸಿತ ಉಂಟಾದರೆ ತತ್ ಕ್ಷಣವೇ ಅವುಗಳನ್ನು ತೆರವು ಮಾಡಲಾಗುತ್ತದೆ. ಈಗಾಗಲೇ ಈ ಕಾರ್ಯ ನಡೆಯುತ್ತಿದೆ.

ನಮಗೆ ಕರೆ ಬರುತ್ತಿದ್ದಂತೆಯೇ ಸಮೀಪದ ಜೆಸಿಬಿ ಚಾಲಕರಿಗೆ ಅಕಾರಿಗಳು ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ಕರೆಸಿಕೊಂಡು ಕಾರ್ಯಾಚರಣೆ ನಡೆಸುತ್ತಾರೆ.

ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ, ಇಲ್ಲಿ ಪ್ರವಾಹವಿದ್ದು ನೀರಿನ ಪ್ರಮಾಣ ತಗ್ಗಿದ ಬಳಿಕ ಇಲ್ಲಿ ಆದ ನಷ್ಟದ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin