ಮಹಾರಾಷ್ಟ್ರದಲ್ಲಿ ಮಹಾ ಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜು.22- ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಗಾರ್ ಜಿಲ್ಲೆಗಳಲ್ಲಿ ನಿನ್ನೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಕೆಲವೆಡೆ ಭಾರಿ ಅವಘಡಗಳು ಸಂಭವಿಸಿವೆ. ಮಳೆಯಿಂದ ಕೆಲ ಪ್ರದೇಶಗಳ ರಸ್ತೆಗಳಿಗೆ ಭಾರಿ ಪ್ರಮಾಣದ ಕಲ್ಲುಗಳು ಉರುಳಿಬಿದ್ದಿವೆ. ರೈಲು ಸೇವೆ ಸ್ಥಗಿತಗೊಂಡಿದೆ.

ಮಳೆಯಲ್ಲಿ ಸಿಲುಕಿದ್ದ ನೂರಾರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಎನ್‍ಡಿಆರ್‍ಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಕಸರಾ ಸಮೀಪದ ಅಂಬರ್‍ಮಾಲಿ ರೈಲು ನಿಲ್ದಾಣದ ಪ್ಲಾಟ್‍ಪಾರಂ ಮಟ್ಟಕ್ಕೆ ನೀರು ನಿಂತಿದೆ.

ಅದೇ ರೀತಿ ಘಾಟ್ ಸೆಕ್ಷನ್‍ನಲ್ಲಿ ಭಾರಿ ಪ್ರಮಾಣದ ಬಂಡೆ ಉರುಳಿಬಿದ್ದಿರುವ ಹಿನ್ನಲೆಯಲ್ಲಿ ರೈಲು ಪ್ರಯಾಣ ರದ್ದುಗೊಳಿಸಲಾಗಿದ್ದು, ಹಳಿ ಮೇಲೆ ಬಿದ್ದಿರುವ ಬಂಡೆ ಹೊರತೆಗೆಯುವ ಕಾರ್ಯ ತೀವ್ರಗೊಳಿಸಲಾಗಿದೆ.

ಥಾಣೆ ಜಿಲ್ಲೆಯ ಸಹಪುರ ತಾಲೂಕಿನಲ್ಲಿರುವ ಸಪ್ಗನ್ ಸೇತುವೆಗೆ ಭಾರಿ ಹಾನಿಯಾಗಿದೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂಜಾಗೃತಾ ಕ್ರಮವಾಗಿ ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸಹಪುರದಲ್ಲಿ ಮೊದಕ್ ಜಲಾಶಯ ತುಂಬಿ ತುಳುಕುತ್ತಿದ್ದು, ಡ್ಯಾಂನ ಎರಡು ಗೇಟ್‍ಗಳನ್ನು ಹೊರತೆಗೆದು ನೀರು ಹೊರಬಿಡಲಾಗುತ್ತಿದೆ.

ಸಹಪುರ ಸುತ್ತಮುತ್ತಲಿನ ಕೆಲ ಗ್ರಾಮಗಳು ಮುಳುಗಡೆಯಾಗಿದ್ದು ಎನ್‍ಡಿಆರ್‍ಎಫ್ ಪಡೆಗಳು ನೀರಿನಲ್ಲಿ ಸಿಲುಕಿಕೊಂಡಿರುವ ಗ್ರಾಮಸ್ಥರನ್ನು ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಗಳಿಗೆ ರವಾನಿಸಿವೆ. ಅದೇ ರೀತಿ ತಗ್ಗುಪ್ರದೇಶಗಳ ನೂರಾರು ಮನೆಗಳಿಗೆ ನೀರು ನುಗ್ಗಿ ಭಾರಿ ಅನಾಹುತಗಳು ಸಂಭವಿಸಿವೆ ಎಂದು ವರದಿಯಾಗಿದೆ.

Facebook Comments