ಕಾಶ್ಮೀರದಲ್ಲಿ ಹಿಮಪಾತ : ಯೋಧರು ಸೇರಿ 8 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜ.14- ಜಮ್ಮು-ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಹಿಮಪಾತ ದುರ್ಘಟನೆಗಳಲ್ಲಿ ಮೂವರು ಯೋಧರು ಸೇರಿದಂತೆ 8 ಮಂದಿ ಮೃತಪಟ್ಟು, ಕೆಲವರು ನಾಪತ್ತೆಯಾಗಿದ್ದಾರೆ.
ಉತ್ತರ ಕಾಶ್ಮೀರದ ಕಣಿವೆ ಪ್ರಾಂತ್ಯ ಮಚಿಲ್ ಸೆಕ್ಟರ್‍ನಲ್ಲಿ ಹಠಾತ್ ಹಿಮಪಾತದಿಂದ ಕರ್ತವ್ಯದಲ್ಲಿದ್ದ ಮೂವರು ಯೋಧರು ಮೃತಪಟ್ಟು, ಇಬ್ಬರು ಸೈನಿಕರು ಕಣ್ಮರೆಯಾಗಿದ್ದಾರೆ.

ನಾಪತ್ತೆಯಾಗಿರುವ ಇಬ್ಬರು ಯೋಧರು ಕೂಡ ಮೃತಪಟ್ಟಿರಬಹುದೆಂಬ ಆತಂಕವಿದೆ. ಹಿಮದ ಬಂಡೆಗಳಡಿ ಸಿಲುಕಿರಬಹುದಾದ ಯೋಧರಿಗಾಗಿ ತೀವ್ರ ಶೋಧ ಮುಂದುವರೆದಿದೆ.
ಕಾಶ್ಮೀರದ ಗಂಡೆರ್‍ಬಾಲ್‍ನ ಗಗನಗಿರಿ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಐವರು ನಾಗರಿಕರು ಸಾವಿಗೀಡಾಗಿದ್ದಾರೆ. ಹಿಮಪರ್ವತದ ಒಂದು ಪಾಶ್ರ್ವ ಕುಸಿದ ಕಾರಣ ಐವರು ಹಿಮಸಮಾಧಿಯಾಗಿದ್ದಾರೆ.

ಈ ದುರ್ಘಟನೆಯಲ್ಲಿ ಕೆಲವರು ಕಣ್ಮರೆಯಾಗಿದ್ದಾರೆ. ಬೃಹತ್ ಮಂಜುಗಡ್ಡೆಗಳ ಅವಶೇಷಗಳಡಿ ಸಿಲುಕಿರುವ ಇತರರಿಗಾಗಿ ತೀವ್ರ ಶೋಧ ಮುಂದುವರೆದಿದೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮತ್ತೊಂದು ಪ್ರಕರಣ:ಜಮ್ಮು-ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆಯ ಬಳಿ ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ ಗರ್ವಾಲ್ ರೈಫಲ್ಸ್ ರೆಜಿಮೆಂಟ್‍ಗೆ ಸೇರಿದ ಯೋಧನೊಬ್ಬ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ದೈನಂದಿನ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿ 11 ಗರ್ವಾಲ್ ರೈಫಲ್ಸ್ ರೆಜಿಮೆಂಟ್‍ಗೆ ಸೇರಿದ ಯೋಧ ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ ಜಮ್ಮು-ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆಯ ಬಳಿ ಹಿಮದಲ್ಲಿ ಸಿಲುಕಿದ್ದಾರೆ. ಕಾಣೆಯಾದ ಸೈನಿಕನನ್ನು ಪತ್ತೆ ಹಚ್ಚಲು ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

2002 ರಿಂದ ಭಾರತೀಯ ಸೇನೆಯ 11ನೇ ಗರ್ವಾಲ್ ರೈಫಲ್ಸ್ ರೆಜಿಮೆಂಟ್‍ನಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ ನೇಗಿ, ಮೂಲತಃ ಉತ್ತರಾಖಂಡದ ಡೆಹ್ರಾಡೂನ್‍ನವರು.
ಗುಲ್ ಮಾರ್ಗ್ ಸೆಕ್ಟರ್‍ನಲ್ಲಿ ಭಾರೀ ಹಿಮಪಾತ ವಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕಣಿವೆ ಪ್ರಾಂತ್ಯಕಾಶ್ಮೀರದ ವಿವಿಧೆಡೆ ಮೂರು ದಿನಗಳಿಂದ ಭಾರೀ ಹಿಮ ಸುರಿದು ಇನ್ನೂ ಕೆಲವೆಡೆ ಹಿಮಪಾತವಾಗಿರುವ ವರದಿಗಳಿವೆ.

Facebook Comments